uttara kannadaಜಿಲ್ಲೆ

ಅಬ್ಬರದ ಮಳೆಗೆ ಮರ ಧರೆಗೆ; ಗ್ಯಾಸ್ ಕೊರತೆ ಹಿನ್ನೆಲೆ ಸೌದೆಗಾಗಿ ಜನವೋ ಜನ!

ಉತ್ತರ ಕನ್ನಡ : ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಭಾನುವಾರ ಸಂಜೆ ದಿಢೀರ್ ಕಾಣಿಸಿಕೊಂಡ ಅಬ್ಬರದ ಗಾಳಿ ಮಳೆ ಮತ್ತು ಆಲಿಕಲ್ಲು ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯ ತೀವ್ರತೆಗೆ ಮುಂಡಗೋಡ–ಪಾಳ–ಹಾನಗಲ್ ರಸ್ತೆಯಲ್ಲಿ ಬೃಹತ್ ಮರವೊಂದು ಬುಡಸಮೇತ ಧರೆಗುರುಳಿದೆ. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು, ಪ್ರಯಾಣಿಕರು ಮತ್ತು ವಾಹನ ಸವಾರರು ಮಳೆಲ್ಲಿಯೇ ಗಂಟೆಗಟ್ಟಲೆ ಪರದಾಡುವಂತಾಯಿತು.

ದೇಶಾದ್ಯಂತ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ರಸ್ತೆಗೆ ಬಿದ್ದಿದ್ದ ಮರವನ್ನು ಕಂಡು ಸ್ಥಳೀಯರು ಸೌದೆಗಾಗಿ ಮುಗಿಬಿದ್ದರು. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ಜನರು ಕೊಡಲಿ ಮತ್ತು ಕತ್ತಿಗಳೊಂದಿಗೆ ಬಂದು ಮರದ ಕೊಂಬೆಗಳನ್ನು ಕತ್ತರಿಸಿ ತಮ್ಮ ಮನೆಗಳಿಗೆ ಸಾಗಿಸುತ್ತಿರುವುದು ಕಂಡುಬಂದಿತು. ಅಡುಗೆ ಅನಿಲದ ಅಭಾವವು ಜನರನ್ನು ಮತ್ತೆ ಸೌದೆ ಒಲೆಗಳತ್ತ ಮುಖ ಮಾಡುವಂತೆ ಮಾಡಿರುವುದಕ್ಕೆ ಈ ಘಟನೆ ಸಾಕ್ಷಿಯಾಯಿತು.

ಸ್ಥಳೀಯರು ಮರದ ಕೊಂಬೆಗಳನ್ನು ಕೊಂಡೊಯ್ದ ನಂತರ, ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ಉಳಿದ ಭಾಗಗಳನ್ನು ಅತ್ಯಂತ ವೇಗವಾಗಿ ಕತ್ತರಿಸಿ ತೆರವುಗೊಳಿಸಿದರು. ಅರಣ್ಯ ಇಲಾಖೆಯ ಸಕಾಲಿಕ ಕಾರ್ಯಾಚರಣೆಯಿಂದಾಗಿ ಸಂಜೆ ವೇಳೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮಗೊಂಡಿತು. ಮಳೆಯ ಆರ್ಭಟ ಕಡಿಮೆಯಾದ ನಂತರ ಪರಿಸ್ಥಿತಿ ತಿಳಿಯಾಯಿತು. x

Comments (0)

Your email address will not be published. Required fields are marked *

Back to top button