ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶಿವಮೊಗ್ಗ ಟೌನ್ ರೈಲು ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ವಿದ್ಯಾನಗರದ ಬಳಿ ಈ ಘಟನೆ ಸಂಭವಿಸಿದೆ. ತಾಳಗುಪ್ಪದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು ಸಂಖ್ಯೆ 16582 ವಿದ್ಯಾನಗರ ನಿಲ್ದಾಣಕ್ಕೆ ಬರುತ್ತಿದ್ದಂತೆ, ಕೈಯಲ್ಲಿ ತಲ್ವಾರ್ ಹಿಡಿದು ಒಳನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಪ್ರಯಾಣಿಕರನ್ನು ಬೆದರಿಸಿ ದಾಂಧಲೆ ನಡೆಸಿದ್ದಾನೆ.
ದುಷ್ಕರ್ಮಿಯು ಎಸ್-9 ಬೋಗಿಯೊಳಗೆ ನುಗ್ಗಿ ಮಾರಕಾಸ್ತ್ರಗಳನ್ನು ಬೀಸಿದ್ದು, ಪ್ರಯಾಣಿಕರನ್ನು ಹೆದರಿಸುವ ಮೂಲಕ ಹಣ ಮತ್ತು ಮೊಬೈಲ್ ಎಗರಿಸಿದ್ದಾನೆ. ತಲ್ವಾರ್ ಬೀಸಿದ್ದರಿಂದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ , ದೂರುದಾರರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪಿಯು, ಮತ್ತೊಬ್ಬ ಪ್ರಯಾಣಿಕನ ಬಳಿಯಿದ್ದ ಮೊಬೈಲ್ ಫೋನ್ ಕಸಿದುಕೊಂಡು ರೈಲು ನಿಲ್ದಾಣದಿಂದ ಪರಾರಿಯಾಗಿದ್ದಾನೆ. ರಾತ್ರಿ ಸುಮಾರು 11:50ರ ವೇಳೆಗೆ ಈ ಘಟನೆ ನಡೆದಿದ್ದು, ರೈಲು ತಡವಾಗಿ ನಿಲ್ದಾಣಕ್ಕೆ ಆಗಮಿಸಿದ ಸಮಯವನ್ನೇ ಹೊಂಚು ಹಾಕಿ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ.
ಈ ಭೀಕರ ಘಟನೆಯನ್ನು ಭಾರತೀಯ ರೈಲ್ವೆ ಇಲಾಖೆ ಅಧಿಕೃತವಾಗಿ ದೃಢಪಡಿಸಿದೆ. ಸಂತ್ರಸ್ತ ಪ್ರಯಾಣಿಕರೊಬ್ಬರು ‘ರೈಲ್ ಮದದ್’ ಪೋರ್ಟಲ್ನಲ್ಲಿ ನೀಡಿದ ದೂರಿಗೆ ಇಲಾಖೆಯು ಪ್ರತ್ಯುತ್ತರ ನೀಡಿದ್ದು, ಘಟನೆಯ ಬಗ್ಗೆ ಶಿವಮೊಗ್ಗ ರೈಲ್ವೆ ಪೊಲೀಸ್ ಮತ್ತು ಬೆಂಗಳೂರು ಜಿಆರ್ಪಿ ಕಂಟ್ರೋಲ್ ರೂಂಗೆ ತಕ್ಷಣವೇ ಮಾಹಿತಿ ರವಾನಿಸಲಾಗಿದೆ ಎಂದು ತಿಳಿಸಿದೆ. ಈ ಸಂಬಂಧ ರೈಲ್ವೆ ಭದ್ರತಾ ಪಡೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದು, ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಭದ್ರತೆಯ ಬಗ್ಗೆ ಪ್ರಯಾಣಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.


