ಮನೆಯಲ್ಲಿ ಇನ್ಮುಂದೆ ನಾಯಿ ಸಾಕುವಂತಿಲ್ಲ! ಜಿಬಿಎ ‘ಡಾಗ್ ಲೈಸನ್ಸ್’ ರೂಲ್ಸ್

ಬೆಂಗಳೂರು : ಮನೆಯಲ್ಲಿ ಮಕ್ಕಳಂತೆ ಶ್ವಾನಗಳನ್ನು ಪ್ರೀತಿಯಿಂದ ಸಾಕುವವರ ಸಂಖ್ಯೆ ಸಾಕಷ್ಟಿದೆ. ಆದರೆ, ಇನ್ನು ಮುಂದೆ ನಗರದಲ್ಲಿ ಶ್ವಾನ ಸಾಕಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕಠಿಣ ನಿಯಮಗಳನ್ನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಸಾಕು ನಾಯಿಗಳಿಗೆ ಲೈಸನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಲು ಪ್ಲ್ಯಾನ್ ಮಾಡಲಾಗುತ್ತಿದೆ.

ಜಿಬಿಎ ರೂಪಿಸುತ್ತಿರುವ ಹೊಸ ನಿಯಮಗಳ ಪ್ರಕಾರ, ಬೆಂಗಳೂರಿನ ಯಾವುದೇ ಮನೆಯಲ್ಲಿ ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಲು ಅವಕಾಶವಿರುವುದಿಲ್ಲ. ಒಂದು ವೇಳೆ ನಿಗದಿತ ಸಂಖ್ಯೆಗಿಂತ ಹೆಚ್ಚು ನಾಯಿಗಳಿದ್ದರೆ, ಅವುಗಳನ್ನು ಜಿಬಿಎ ವಶಕ್ಕೆ ಪಡೆದು ಎನ್‌ಜಿಓಗಳಿಗೆ ಅಥವಾ ಪ್ರಾಣಿ ಕೇಂದ್ರಗಳಿಗೆ ಹಸ್ತಾಂತರಿಸಲಿದೆ. ಪ್ರತಿ ವರ್ಷ ಶ್ವಾನದ ಮಾಲೀಕರು ಲೈಸನ್ಸ್ ಪಡೆಯುವುದು ಮಾತ್ರವಲ್ಲದೆ, ಅದನ್ನು ವಾರ್ಷಿಕವಾಗಿ ನವೀಕರಣಗೊಳಿಸಬೇಕಾಗುತ್ತದೆ. ನಾಯಿಗಳ ತಳಿ ಅಥವಾ ವರ್ಗದ ಆಧಾರದ ಮೇಲೆ ಲೈಸನ್ಸ್ ಶುಲ್ಕವನ್ನು ನಿಗದಿಪಡಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಂದು ಸಾಕು ನಾಯಿಗೂ ಮೈಕ್ರೋ ಚಿಪ್ ಅಳವಡಿಸುವುದು ಮತ್ತು ರೇಬಿಸ್ ಲಸಿಕೆ ಹಾಕಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ. ಈ ಕುರಿತು ನೊಂದಾಯಿತ ಪಶುವೈದ್ಯರಿಂದ ದೃಢೀಕರಣ ಪಡೆಯುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ, 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವುದನ್ನೂ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚು ಆಕ್ರಮಣಕಾರಿ ಅಥವಾ ಉಗ್ರ ಸ್ವರೂಪದ ನಾಯಿಗಳನ್ನು ಸಾಕುವುದಕ್ಕೆ ನಿಷೇಧ ಹೇರುವ ಬಗ್ಗೆಯೂ ಜಿಬಿಎ ಆಲೋಚಿಸುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಮಾಲೀಕರು ಅತ್ಯಂತ ಎಚ್ಚರಿಕೆ ವಹಿಸಬೇಕಾಗುತ್ತದೆ. ನಾಯಿಯ ಕತ್ತಿಗೆ ಕಡ್ಡಾಯವಾಗಿ ಹಗ್ಗ ಅಥವಾ ಚೈನ್ ಇರಲೇಬೇಕು. ವಾಕಿಂಗ್ ವೇಳೆ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದರೆ ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು, ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಸಾಕು ನಾಯಿಗಳು ತಪ್ಪಿಸಿಕೊಂಡು ಜಿಬಿಎ ಅಧಿಕಾರಿಗಳ ವಶಕ್ಕೆ ಸೇರಿದರೆ, ಅವುಗಳನ್ನು ಬಿಡಿಸಿಕೊಳ್ಳಲು ದಂಡ ಪಾವತಿಸಬೇಕಾಗುತ್ತದೆ. 72 ಗಂಟೆಯೊಳಗೆ ಬಿಡಿಸಿಕೊಂಡರೆ ಒಂದು ಸಾವಿರ ರೂಪಾಯಿ ದಂಡವಿರುತ್ತದೆ, ಆನಂತರ ಪ್ರತಿ ದಿನಕ್ಕೆ 200 ರೂಪಾಯಿ ಹೆಚ್ಚುವರಿ ದಂಡ ತೆರಬೇಕಾಗುತ್ತದೆ.
ಈ ನಿಯಮಗಳು ಶ್ವಾನ ಮಾಲೀಕರಲ್ಲಿ ಸ್ವಲ್ಪ ಆತಂಕ ಮೂಡಿಸಿದ್ದರೂ, ನಗರದ ಶಿಸ್ತು ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇವು ಅಗತ್ಯ ಎಂದು ಜಿಬಿಎ ಅಭಿಪ್ರಾಯಪಟ್ಟಿದೆ. ಒಟ್ಟಿನಲ್ಲಿ, ಬೆಂಗಳೂರಿನ ಶ್ವಾನ ಪ್ರಿಯರು ಈ ಹೊಸ ಬದಲಾವಣೆಗಳಿಗೆ ಸಜ್ಜಾಗಬೇಕಿದೆ.




