Thursday, February 12, 2026
27.3 C
Bengaluru
Google search engine
LIVE
ಮನೆಜಿಲ್ಲೆಲಸ್ಸಿ ಕುಡಿದು ಕಿಡ್ನಾಪ್ ನಾಟಕವಾಡಿದ ಬಾಲಕಿಯರು! ಪೊಲೀಸರನ್ನೇ ಸುಸ್ತು ಮಾಡಿದ ಕಥೆ

ಲಸ್ಸಿ ಕುಡಿದು ಕಿಡ್ನಾಪ್ ನಾಟಕವಾಡಿದ ಬಾಲಕಿಯರು! ಪೊಲೀಸರನ್ನೇ ಸುಸ್ತು ಮಾಡಿದ ಕಥೆ

ಶಾಲೆಗೆ ಹೋಗಲು ಮನಸ್ಸಿಲ್ಲದ ಇಬ್ಬರು ಬಾಲಕಿಯರು ಸಿನಿಮಾ ಸ್ಟೈಲ್‌ನಲ್ಲಿ ಅಪಹರಣದ ನಾಟಕವಾಡಿ ಪೊಲೀಸರನ್ನೇ ದಿಕ್ಕು ತಪ್ಪಿಸಿರುವ ಅಚ್ಚರಿಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. 14 ಮತ್ತು 8 ವರ್ಷದ ಇಬ್ಬರು ಸಹೋದರಿಯರು ಶಾಲೆಯಿಂದ ನಾಪತ್ತೆಯಾಗಿದ್ದರು. ಶಾಲೆಗೆ ಹೋದ ಬಾಲಕಿಯರು ತರಗತಿಗೆ ಹಾಜರಾಗದಿದ್ದನ್ನು ಗಮನಿಸಿ ವಿಚಾರಿಸಿದಾಗ, ಶಾಲಾ ಕ್ಯಾಂಪಸ್‌ನಲ್ಲಿ ಅವರ ಬ್ಯಾಗ್‌ಗಳು ಮಾತ್ರ ಪತ್ತೆಯಾಗಿದ್ದವು. ಇದರಿಂದ ಆತಂಕಕ್ಕೊಳಗಾದ ಪೋಷಕರು ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಇಡೀ ಕುಟುಂಬ ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಬಾಲಕಿಯರು ಪಾದಚಾರಿಯೊಬ್ಬರ ಫೋನ್‌ನಿಂದ ತಂದೆಗೆ ಕರೆ ಮಾಡಿ ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದರು.

ಪೋಷಕರು ಬಾಲಕಿಯರನ್ನು ಎಲ್ಲಿ ಹೋಗಿದ್ದಿರಿ ಎಂದು ವಿಚಾರಿಸಿದಾಗ ಅವರು ಹೇಳಿದ ಕಥೆ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು. “ನಾಲ್ವರು ಸದಸ್ಯರ ಗ್ಯಾಂಗ್ ನಮ್ಮನ್ನು ಕಾರಿನಲ್ಲಿ ಅಪಹರಿಸಿತ್ತು, ಬೆದರಿಸಿ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದರು” ಎಂದು ಹಿರಿಯ ಬಾಲಕಿ ಕಟ್ಟುಕಥೆ ಹೇಳಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದರು. ಇಂಜೆಕ್ಷನ್ ನೀಡಿ ಕಿಡ್ನಾಪ್ ಮಾಡಿರುವ ಸುದ್ದಿಯಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆಮಾಡಿತ್ತು.

ಆದರೆ, ಪೊಲೀಸರು ಶಾಲೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ. ಅಪಹರಣಕ್ಕೊಳಗಾಗಿದ್ದೇವೆ ಎಂದಿದ್ದ ಬಾಲಕಿಯರು ಸಮೀಪದ ಬೀದಿಗಳಲ್ಲಿ ಅತ್ಯಂತ ನಿರಾಳವಾಗಿ ಅಡ್ಡಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಯಾವುದೇ ಕಾರು ಅಥವಾ ಅಪರಿಚಿತ ವ್ಯಕ್ತಿಗಳು ಅವರನ್ನು ಹಿಂಬಾಲಿಸಿರುವುದು ಕಂಡುಬಂದಿರಲಿಲ್ಲ. ಸಿಸಿಟಿವಿ ಸಾಕ್ಷ್ಯ ಮುಂದಿಟ್ಟು ಪೊಲೀಸರು ಮತ್ತೆ ವಿಚಾರಿಸಿದಾಗ ಬಾಲಕಿಯರು ನಿಜ ಒಪ್ಪಿಕೊಂಡಿದ್ದಾರೆ. ಅಂದು ಶಾಲೆಗೆ ಹೋಗಲು ಇಷ್ಟವಿಲ್ಲದೆ ಬ್ಯಾಗ್ ಅಲ್ಲಿಯೇ ಇಟ್ಟು ಹೊರಬಂದಿದ್ದ ಇವರು, ಸಮೀಪದ ಅಂಗಡಿಯೊಂದರಲ್ಲಿ ಲಸ್ಸಿ ಕುಡಿದು ಕಾಲ ಕಳೆದಿದ್ದರು. ಪೋಷಕರ ಬೈಗುಳಕ್ಕೆ ಹೆದರಿ ಈ ಕಿಡ್ನಾಪ್ ಕಥೆ ಸೃಷ್ಟಿಸಿರುವುದಾಗಿ ಬಾಲಕಿಯರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments