ಹಾಸನ: ಶ್ರವಣಬೆಳಗೊಳ ಸಮೀಪದ ಕೊತ್ತನಘಟ್ಟ ಗ್ರಾಮದಲ್ಲಿ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಜರುಗಿದೆ.
ಮೃತರನ್ನು ಯೋಗೇಶ್ (50) ಎಂದು ಗುರುತಿಸಲಾಗಿದ್ದು, ಚನ್ನರಾಯಪಟ್ಟಣದ ಖಾಸಗಿ ಫೈನಾನ್ಸ್ ಒಂದರಲ್ಲಿ 7 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇಲ್ಲಿಯವರೆಗೆ ಪ್ರತಿ ತಿಂಗಳು ತಪ್ಪದೆ ಕಂತು ಪಾವತಿಸುತ್ತಿದ್ದ ಅವರು, ಅನಿವಾರ್ಯ ಕಾರಣಗಳಿಂದ ಕಳೆದ ಎರಡು ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.
ಫೆಬ್ರವರಿ 4ರ ರಾತ್ರಿ ಯೋಗೇಶ್ ಅವರ ಮನೆಗೆ ಬಂದಿದ್ದ ಇಬ್ಬರು ಫೈನಾನ್ಸ್ ಸಿಬ್ಬಂದಿ, ಬಾಕಿ ಹಣ ಪಾವತಿಸದಿದ್ದರೆ ಮನೆ ಸೀಜ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರ ಮುಂದೆ ಮಾನ ಹರಾಜಾಗುವ ಭೀತಿ ಹಾಗೂ ಸಾಲದ ಹೊರೆಯಿಂದ ಕಂಗೆಟ್ಟ ರೈತ ಯೋಗೇಶ್, ಮನೆಯಲ್ಲಿ ವಿಷ ಸೇವಿಸಿ ತಮ್ಮ ಜೀವನ ಕೊನೆಗಾಣಿಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರೈತನ ಸಾವಿಗೆ ಕಾರಣವಾದ ಫೈನಾನ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಶ್ರವಣಬೆಳಗೊಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಹಾಗೂ ಕಂತು ಪಾವತಿ ವಿಚಾರದಲ್ಲಿ ಮಾನವೀಯತೆ ತೋರಬೇಕೆಂಬ ನಿಯಮಗಳಿದ್ದರೂ, ಖಾಸಗಿ ಸಂಸ್ಥೆಗಳ ಅತಿರೇಕದ ವರ್ತನೆ ಒಬ್ಬ ಅನ್ನದಾತನ ಬಲಿ ಪಡೆದಿರುವುದು ಸಾರ್ವಜನಿಕರ ತೀವ್ರ ಖಂಡನೆಗೆ ಗುರಿಯಾಗಿದೆ.


