bengaluruಕ್ರೈಂ ಸ್ಟೋರಿರಾಜ್ಯಸುದ್ದಿ

ಜೈಲಿನಲ್ಲಿ ಭದ್ರತಾ ಲೋಪ: ಡಿಜಿಪಿ ಹೆಸರಲ್ಲಿ ಸುಳ್ಳು ಆರೋಪ ಮಾಡಿದ ಕೈದಿಗಳ ಸಂಚು ಬಯಲು..!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸಂಚಲನ ಮೂಡಿಸಿದೆ. ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಅವರೇ ಮೊಬೈಲ್ ನೀಡಿದ್ದಾರೆಂದು ಕಿಡಿಗೇಡಿ ಕೈದಿಗಳು ವಿಡಿಯೋದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಜೈಲಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡಿದ್ದ ಡಿಜಿಪಿ ಅವರಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಜೈಲಿನಲ್ಲಿ ತಪಾಸಣೆ ನಡೆಸಿದಾಗ, ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ ಡ್ರೈನೇಜ್ ಮಾರ್ಗದಲ್ಲಿ ಅಡಗಿಸಿಟ್ಟಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ತನಿಖೆಯ ವೇಳೆ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಈ ವಿಡಿಯೋ ಮಾಡಿರುವುದು ದೃಢಪಟ್ಟಿದೆ. ಈ ಕೈದಿಗಳನ್ನು ಈ ಹಿಂದೆ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಅವರು, ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರಿಗೆ ಚ್ಯುತಿ ತರಲು ಈ ಸಂಚು ರೂಪಿಸಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದ್ದು, ಆರೋಪಿ ಕೈದಿಗಳನ್ನು ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಜೈಲಿನ ಕೆಲವು ಭಾಗಗಳಲ್ಲಿ ನೆಟ್‌ವರ್ಕ್ ಸಿಗ್ನಲ್ ಲಭ್ಯವಿರುವುದನ್ನು ಗಮನಿಸಿರುವ ಇಲಾಖೆಯು ಭದ್ರತೆಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಮುಂದಾಗಿದೆ.

Comments (0)

Your email address will not be published. Required fields are marked *

Back to top button