Shivamoggaಕ್ರೈಂ ಸ್ಟೋರಿರಾಜ್ಯಸುದ್ದಿ

ಗರ್ಭಿಣಿ ನರ್ಸ್ ಅನುಮಾನಾಸ್ಪದ ಸಾವು: ಅತ್ತೆ-ಮಾವ ಸೇರಿದಂತೆ ನಾಲ್ವರ ಬಂಧನ..!

ಶಿವಮೊಗ್ಗ: ಸೊರಬ ತಾಲ್ಲೂಕಿನ ಹೊಡಬಟ್ಟೆ ಗ್ರಾಮದಲ್ಲಿ ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದು ಕೇವಲ ಆತ್ಮಹತ್ಯೆಯಲ್ಲ, ಪತಿ ಮನೆಯವರಿಂದಲೇ ನಡೆದ ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮೃತ ಮಹಿಳೆಯನ್ನು 30 ವರ್ಷದ ಶ್ವೇತಾ ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶ್ವೇತಾ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದ್ದು, ತೀವ್ರ ಗಾಯಗೊಂಡಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಸಾವಿನ ಹಿಂದೆ ಮನೆಯ ಆಸ್ತಿ ಮತ್ತು ಜಾಗದ ವಿಚಾರವಾಗಿ ನಡೆದ ದೊಡ್ಡ ಸಂಚಿದೆ ಎಂದು ಶ್ವೇತಾ ಅವರ ಕುಟುಂಬಸ್ಥರು ದೂರಿದ್ದಾರೆ. ಹಿರಿಯ ಮಗ ಹೇಮಂತ್ ಮತ್ತು ಸೊಸೆ ದಿವ್ಯಾ ಅವರ ಮೇಲಿನ ಅತಿಯಾದ ಪ್ರೀತಿಯಿಂದಾಗಿ, ಅತ್ತೆ-ಮಾವ ಶ್ವೇತಾರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಆಕೆಯನ್ನು ಮನೆಯಿಂದ ಹೊರಹಾಕಲು ನಿರಂತರ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಅವರೇ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ” ಎಂದು ಸಂಬಂಧಿಕರು ಆರೋಪಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಶ್ವೇತಾ ಅವರ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಮೈದುನ ಹೇಮಂತ್ ಮತ್ತು ದಿವ್ಯಾ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಗರ್ಭಿಣಿ ಮಗಳ ಶವದ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಸಾವಿನ ಹಿಂದಿನ ನಿಖರ ಕಾರಣಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

Comments (0)

Your email address will not be published. Required fields are marked *

Back to top button