DAVANAGEREಜಿಲ್ಲೆ

ದಾವಣಗೆರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ!

ದಾವಣಗೆರೆ: ಈರುಳ್ಳಿ ಮಾರುಕಟ್ಟೆಯಲ್ಲಿ ಜಾಗತಿಕ ವಿದ್ಯಮಾನಗಳ ಹೊಡೆತಕ್ಕೆ ಸಿಲುಕಿ ಬೆಲೆ ಪಾತಾಳಕ್ಕೆ ಕುಸಿದಿರುವುದು ಕೃಷಿಕರ ಬದುಕನ್ನು ಹೈರಾಣಾಗಿಸಿದೆ. ಎಲ್ಲಿಯೋ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಸ್ಥಳೀಯ ಮಾರುಕಟ್ಟೆಯ ಮೇಲೆ ಭೀಕರವಾಗಿ ಬೀರುತ್ತಿದ್ದು, ಬೆಲೆ ಕುಸಿತದಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ತಗುಲಿದ ಸಾರಿಗೆ ಮತ್ತು ಕೂಲಿ ವೆಚ್ಚವನ್ನೂ ಭರಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜೆಗೆ ಕೇವಲ 6 ರಿಂದ 12 ರೂಪಾಯಿಗೆ ಇಳಿಕೆಯಾಗಿದ್ದು, ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

ಮಾರುಕಟ್ಟೆಯ ಇಂದಿನ ಸ್ಥಿತಿಯನ್ನು ಗಮನಿಸಿದರೆ, ಉತ್ತಮ ಗುಣಮಟ್ಟದ ಮತ್ತು ದೊಡ್ಡ ಗಾತ್ರದ ಈರುಳ್ಳಿಗೆ ಕೇವಲ 10 ರಿಂದ 12 ರೂಪಾಯಿಗಳು ಮಾತ್ರ ಸಿಗುತ್ತಿವೆ. ಇನ್ನು ಸಣ್ಣ ಗಾತ್ರದ ಈರುಳ್ಳಿಯ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದ್ದು, ಕೆಜಿಗೆ ಕೇವಲ 6 ರಿಂದ 8 ರೂಪಾಯಿ ಲಭಿಸುತ್ತಿದೆ. ಬೆಳೆ ಬೆಳೆಯಲು ಮಾಡಿದ ಖರ್ಚು ಹಾಗಿರಲಿ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಈ ಮೊತ್ತವು ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೂ ಸರಿದೂಗುತ್ತಿಲ್ಲ ಎಂಬುದು ರೈತರ ಅಳಲು.

ಜಾಗತಿಕ ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿರುವುದು ಈ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇಂಧನ ಮತ್ತು ಸಿಲಿಂಡರ್ ಬೆಲೆ ಏರಿಕೆಯಾದ ಕಾರಣ ಹಲವು ಹೋಟೆಲ್‌ಗಳು ಮತ್ತು ವ್ಯಾಪಾರ ಮಳಿಗೆಗಳು ತಮ್ಮ ವಹಿವಾಟನ್ನು ಕಡಿಮೆಗೊಳಿಸಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೇಡಿಕೆ ಗಣನೀಯವಾಗಿ ಕುಸಿದಿದ್ದು, ಬೆಲೆ ಕುಸಿತಕ್ಕೆ ನೇರ ಕಾರಣವಾಗಿದೆ.

ಇನ್ನೊಂದೆಡೆ ಈರುಳ್ಳಿ ಬೆಲೆ ಕುಸಿದಿದ್ದರೂ ಅದನ್ನು ಪ್ಯಾಕ್ ಮಾಡುವ ಖಾಲಿ ಚೀಲದ ಬೆಲೆ ಮಾತ್ರ 18 ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಒಂದು ಕೆಜಿ ಈರುಳ್ಳಿಯ ಬೆಲೆಗಿಂತ ಒಂದು ಖಾಲಿ ಚೀಲದ ಬೆಲೆಯೇ ಹೆಚ್ಚಾಗಿದೆ. ರೈತರು ಈರುಳ್ಳಿಯ ಜೊತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಬರಬೇಕಾದ ಅನಿವಾರ್ಯತೆ ಎದುರಾಗಿದ್ದು, ಲಾಭದ ಬದಲು ನಷ್ಟವನ್ನೇ ಹೊತ್ತು ಮನೆಗೆ ಮರಳುತ್ತಿದ್ದಾರೆ.

ದಾವಣಗೆರೆ ಮಾರುಕಟ್ಟೆಗೆ ಕೇವಲ ಸ್ಥಳೀಯರಷ್ಟೇ ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಹೊಸಪೇಟೆಯಿಂದ ನೂರಾರು ಕ್ವಿಂಟಾಲ್ ಈರುಳ್ಳಿ ಹರಿದು ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ದರ ನೋಡಿ ಪ್ರತಿಯೊಬ್ಬ ರೈತನೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ. ವಿಶೇಷವಾಗಿ ಸ್ಥಳೀಯವಾಗಿ ಬೆಳೆದ ಈರುಳ್ಳಿಗೆ ನಾಸಿಕ್ ಈರುಳ್ಳಿಯ ಅರ್ಧದಷ್ಟು ಬೆಲೆಯೂ ಸಿಗುತ್ತಿಲ್ಲ ಎಂಬುದು ರೈತರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.

Comments (0)

Your email address will not be published. Required fields are marked *

Back to top button