ದಾವಣಗೆರೆ ದಕ್ಷಿಣದಲ್ಲಿ ‘ಕೈ’ ನಾಯಕರ ಹೈಡ್ರಾಮಾ..!

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಈಗ ಆಂತರಿಕ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತದ ಕಿಚ್ಚು ಎದ್ದಿದೆ. ಮುಖ್ಯವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ (ಮಲ್ಲಣ್ಣ) ನಡುವಿನ ಹಳೆಯ ವೈಮನಸ್ಸು ಈಗ ಸ್ಫೋಟಗೊಂಡಿದೆ. “ಜಮೀರ್ ಅಹ್ಮದ್ ಬರದಿದ್ದರೂ ಪ್ರಚಾರ ನಡೆಯುತ್ತದೆ” ಎಂಬ ಮಲ್ಲಿಕಾರ್ಜುನ್ ಅವರ ಹೇಳಿಕೆಯು ಜಮೀರ್ ಅವರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಇದುವರೆಗೆ ಚುನಾವಣಾ ಕಣಕ್ಕೆ ಕಾಲಿಟ್ಟಿಲ್ಲ ಎನ್ನಲಾಗಿದ್ದು, ಕೇರಳ ಪ್ರವಾಸದಲ್ಲಿರುವ ಅವರು ಅಲ್ಲಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಏಪ್ರಿಲ್ 3ರಂದು ನಡೆಯಲಿರುವ ಪ್ರಮುಖ ಪ್ರಚಾರ ಕಾರ್ಯಕ್ರಮಕ್ಕೂ ಜಮೀರ್ ಗೈರಾಗುವುದು ಬಹುತೇಕ ಖಚಿತವಾಗಿದ್ದು, ಇದು ದಾವಣಗೆರೆ ದಕ್ಷಿಣದ ಮುಸ್ಲಿಂ ಮತಗಳ ಮೇಲೆ ಎಫೆಕ್ಟ್ ಬೀರುವ ಭೀತಿ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.
ಇನ್ನೊಂದೆಡೆ, ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ತೆರೆಮರೆಯಲ್ಲಿ ಭರ್ಜರಿ ತಂತ್ರಗಾರಿಕೆ ನಡೆಯುತ್ತಿದೆ. ಸಾದಿಕ್ ಅವರು ಕಣದಿಂದ ಹಿಂದೆ ಸರಿದಿದ್ದರೂ ಸಹ, ಸಿ.ಎಂ. ಇಬ್ರಾಹಿಂ ಮತ್ತು ಎಸ್ಡಿಪಿಐ (SDPI) ನಡುವೆ ನಡೆಯುತ್ತಿರುವ ರಹಸ್ಯ ಮಾತುಕತೆಗಳು ಕಾಂಗ್ರೆಸ್ಗೆ ಹಿನ್ನಡೆಯಾಗುವ ಮುನ್ಸೂಚನೆ ನೀಡುತ್ತಿವೆ. ಪಕ್ಷೇತರ ಅಭ್ಯರ್ಥಿ ಆದಿಲ್ ಪಾಷಾ ಅವರನ್ನು ಬೆಂಬಲಿಸುವ ಮೂಲಕ ಸಿ.ಎಂ. ಇಬ್ರಾಹಿಂ ಅವರು ಹೊಸ ದಾಳ ಉರುಳಿಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಒಂದು ವೇಳೆ ಜಮೀರ್ ಅಹ್ಮದ್ ಅಸಮಾಧಾನಗೊಂಡು ಪ್ರಚಾರದಿಂದ ದೂರ ಉಳಿದರೆ, ಅದು ಮುಸ್ಲಿಂ ಮತಗಳ ವಿಭಜನೆಗೆ ಕಾರಣವಾಗಿ ಕಾಂಗ್ರೆಸ್ನ ಗೆಲುವಿನ ಓಟಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ದಾವಣಗೆರೆ ದಕ್ಷಿಣದ ಈ ಉಪಸಮರದಲ್ಲಿ ಈಗ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ನಾಯಕರ ನಡುವಿನ ಪ್ರತಿಷ್ಠೆಯ ಹೋರಾಟವೇ ಅಬ್ಬರಿಸುತ್ತಿದೆ.




