Top Newsರಾಜಕೀಯರಾಜ್ಯಸುದ್ದಿಹಣಕಾಸು

ಕರ್ನಾಟಕಕ್ಕೆ ಕೇಂದ್ರದ ‘ಕೈ’ಕೊಟ್ಟ ಅನುದಾನ; 8,000 ಕೋಟಿ ರೂ. ಬಾಕಿ

ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಸುಮಾರು 8,000 ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನವನ್ನು ಬಾಕಿ ಉಳಿಸಿಕೊಂಡಿರುವ ವಿಚಾರವನ್ನು ರಾಜ್ಯಸಭಾ ಸಂಸದ ಸಯ್ಯದ್ ನಾಸೀರ್ ಹುಸೇನ್ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.

ರಾಜ್ಯವು ಎಲ್ಲಾ ನಿಯಮಾವಳಿಗಳನ್ನು ಪೂರೈಸಿದ್ದರೂ ಸಹ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ಗ್ರಾಮೀಣಾಭಿವೃದ್ಧಿಯ ಮೇಲೆ ಬೀರಲಿರುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ನೀಡಬೇಕಾದ ಹಣವನ್ನು ತಡೆಹಿಡಿಯುವುದು ನ್ಯಾಯಸಮ್ಮತವಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅನುದಾನದ ಕೊರತೆಯಿಂದಾಗಿ ಕರ್ನಾಟಕದ ಸುಮಾರು 6,000 ಗ್ರಾಮ ಪಂಚಾಯಿತಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ನಾಸೀರ್ ಹುಸೇನ್ ವಿವರಿಸಿದ್ದಾರೆ. ಮುಖ್ಯವಾಗಿ 2,133 ಕೋಟಿ ರೂ.ಗಳ ಪಂಚಾಯತ್ ಅನುದಾನ ಬಿಡುಗಡೆಯಾಗದ ಕಾರಣ, ಸ್ಥಳೀಯ ಆಡಳಿತ ಸಿಬ್ಬಂದಿ ಮತ್ತು ನೈರ್ಮಲ್ಯ ಕಾರ್ಮಿಕರ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮತ್ತು ಬೀದಿ ದೀಪಗಳ ನಿರ್ವಹಣೆಯಂತಹ ಮೂಲಭೂತ ಕಾರ್ಯಗಳಿಗೂ ಹಣವಿಲ್ಲದಂತಾಗಿದ್ದು, ಪಂಚಾಯಿತಿಗಳ ದೈನಂದಿನ ಕಾರ್ಯಾಚರಣೆಯೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಗ್ರಾಮೀಣ ಪ್ರದೇಶದ ಜನರ ಜೀವನೋಪಾಯಕ್ಕೆ ಅಡಿಪಾಯವಾಗಿರುವ ಈ ಯೋಜನೆಗಳ ಹಣವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ಕರ್ನಾಟಕದ ಗ್ರಾಮೀಣಾಭಿವೃದ್ಧಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button