
ಬೆಂಗಳೂರು: ಆಟೋ ಎಲ್ಪಿಜಿ ಗ್ಯಾಸ್ ಅಭಾವವು ತೀವ್ರ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು, ನಗರದ ಸಾವಿರಾರು ಆಟೋ ಚಾಲಕರು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಚಾಲಕರು ಮಧ್ಯರಾತ್ರಿಯಿಂದಲೇ ಬಂಕ್ಗಳ ಮುಂದೆ ಕಿಲೋಮೀಟರ್ಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ. ವಿಶೇಷವಾಗಿ ಯಲಹಂಕ ಮತ್ತು ನಾಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ಕಿಲೋಮೀಟರ್ವರೆಗೂ ಆಟೋಗಳ ಬೃಹತ್ ಸರದಿ ಸಾಲು ಕಂಡುಬರುತ್ತಿದ್ದು, ಚಾಲಕರು ದಿನವಿಡೀ ಗ್ಯಾಸ್ಗಾಗಿ ಕಾಯುತ್ತಾ ತಮ್ಮ ದೈನಂದಿನ ದುಡಿಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಆಟೋ ಚಾಲಕ ಪ್ರತಿದಿನ ಸುಮಾರು 700 ರಿಂದ 800 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದು, ಮಕ್ಕಳ ಶಾಲಾ ಶುಲ್ಕ ಮತ್ತು ವಾಹನದ ಸಾಲದ ಕಂತು ಕಟ್ಟಲಾಗದೆ ಕಣ್ಣೀರಿಡುತ್ತಿದ್ದಾರೆ.
ಈ ಸಮಸ್ಯೆಯ ಹಿನ್ನೆಲೆಯಲ್ಲಿ ‘ಪೀಸ್ ಆಟೋ’ ಸಂಘಟನೆಯು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಸೋಮವಾರದವರೆಗೆ ಗಡುವು ನೀಡಿದೆ. ಈ ಅವಧಿಯೊಳಗೆ ಗ್ಯಾಸ್ ಅಭಾವ ನೀಗದಿದ್ದರೆ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಸಂಘಟನೆಯ ಅಧ್ಯಕ್ಷ ರಘು ಎಚ್ಚರಿಸಿದ್ದಾರೆ. ಈ ಹಿಂದೆ 55 ರೂಪಾಯಿ ಇದ್ದ ಗ್ಯಾಸ್ ದರವು ಈಗ ಕಾಳಸಂತೆಯಲ್ಲಿ 135 ರೂಪಾಯಿವರೆಗೆ ಏರಿಕೆಯಾಗಿದೆ ಎಂದು ಅವರು ದೂರಿದ್ದಾರೆ. ಅನಿವಾರ್ಯವಾಗಿ ಗ್ರಾಹಕರಿಂದ 10-20 ರೂಪಾಯಿ ಹೆಚ್ಚುವರಿ ಬಾಡಿಗೆ ಕೇಳಿದರೆ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಚಾಲಕರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಬಂಕ್ ವ್ಯವಸ್ಥಾಪಕರ ಮಾಹಿತಿ ಪ್ರಕಾರ, ಗ್ಯಾಸ್ ಲೋಡ್ ಬರುವುದು ಅನಿಶ್ಚಿತವಾಗಿರುವುದರಿಂದ ಸ್ಟಾಕ್ ಬಂದ ತಕ್ಷಣವೇ ಖಾಲಿಯಾಗುತ್ತಿದೆ. ಇದರಿಂದಾಗಿ ನಗರದ ಬಹುತೇಕ ಬಂಕ್ಗಳ ಮುಂದೆ ‘ನೋ ಸ್ಟಾಕ್’ ಬೋರ್ಡ್ಗಳು ರಾರಾಜಿಸುತ್ತಿವೆ. ಸರ್ಕಾರ ಹೋಟೆಲ್ಗಳಿಗೆ ನೀಡುವ ಆದ್ಯತೆಯನ್ನು ಆಟೋ ಚಾಲಕರಿಗೂ ನೀಡಬೇಕು ಮತ್ತು ಕೂಡಲೇ ಗ್ಯಾಸ್ ಪೂರೈಕೆಯನ್ನು ಸರಿಪಡಿಸಬೇಕು ಎಂಬುದು ಚಾಲಕರ ಪ್ರಬಲ ಆಗ್ರಹವಾಗಿದೆ.




