
ಬೆಂಗಳೂರು: ಬೆಂಗಳೂರು ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಹೋಗುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗಲಿದೆ. 2022ರಲ್ಲಿ ನಿಲ್ಲಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಇದೀಗ ಮತ್ತೆ ಆರಂಭಿಸಲು ಬೆಂಗಳೂರು ಟ್ರಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಮಾರ್ಚ್ 25 ರಿಂದಲೇ ಬೆಂಗಳೂರಿನಲ್ಲಿ ಟೋಯಿಂಗ್ ಪ್ರಕ್ರಿಯೆ ಪುನರಾರಂಭವಾಗುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಪ್ರತಿ ಪಾಲಿಕೆ ವ್ಯಾಪ್ತಿಗೆ 2 ಟೋಯಿಂಗ್ ವಾಹನಗಳಂತೆ ಒಟ್ಟು 10 ವಾಹನಗಳನ್ನು ಒದಗಿಸಲಾಗಿದೆ.
ಈ ಟೋಯಿಂಗ್ ಕಾರ್ಯಾಚರಣೆ ಗ್ರೇಟರ್ ಬೆಂಗಳೂರು ಅಥಾರಿಟಿ ಸಹಯೋಗದಲ್ಲಿ ನಡೆಯಲಿದ್ದು, ಟೋಯಿಂಗ್ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ಜಿಬಿಎ ವತಿಯಿಂದ ನಿಯೋಜಿಸಲಾಗುತ್ತದೆ. ಸಂಚಾರಿ ಪೊಲೀಸರು ದಂಡ ವಿಧಿಸುವ ಕೆಲಸ ಮಾಡಲಿದ್ದು, ಟೋಯಿಂಗ್ ಕಾರ್ಯವನ್ನು ಜಿಬಿಎ ಸಿಬ್ಬಂದಿ ನಿರ್ವಹಿಸಲಿದ್ದಾರೆ.
ನೋ ಪಾರ್ಕಿಂಗ್ ಉಲ್ಲಂಘನೆಗೆ ಈಗಾಗಲೇ 500 ರೂ. ದಂಡ ನಿಗದಿ ಮಾಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ವಾಹನಗಳ ಆಧಾರದಲ್ಲಿ ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 650 ರೂ. ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದ್ದು, ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ಟೋಯಿಂಗ್ ಚಾರ್ಜ್ ನಿಗದಿ ಮಾಡಲಾಗಿದೆ.




