ಕನ್ನಡ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಗಾಂಧಿನಗರದಿಂದ ಹಿಡಿದು ಇಡೀ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿವೆ. ಪಂಜಾಬಿ ಮೂಲದ ವ್ಯಕ್ತಿಯೊಬ್ಬರ ಜೊತೆ ರಾಗಿಣಿ ಅತ್ಯಂತ ಆಪ್ತವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು “ನಟಿ ಕೊನೆಗೂ ತಮ್ಮ ಹುಡುಗನನ್ನು ಪರಿಚಯಿಸಿದರಾ?” ಎಂದು ಪ್ರಶ್ನಿಸಲು ಶುರು ಮಾಡಿದ್ದಾರೆ. ಈ ಫೋಟೋಗಳಲ್ಲಿ ನಟಿ ನಗುಮೊಗದಿಂದ ಪೋಸ್ ನೀಡಿದ್ದರೆ, ವ್ಯಕ್ತಿಯೊಬ್ಬರು ಹಿಂಬದಿಯಿಂದ ಅವರನ್ನು ತಬ್ಬಿಕೊಂಡಿದ್ದಾರೆ.

ನಟಿಯ ಜೊತೆ ಕಾಣಿಸಿಕೊಂಡಿರುವ ಈ ವ್ಯಕ್ತಿ ಗುರ್ಮೀತ್ ಅಹುಲ್ವಾಲಿಯಾ ಎಂದು ಗುರುತಿಸಲಾಗಿದೆ. ರಾಗಿಣಿ ಈ ಫೋಟೋಗಳಿಗೆ ನೀಡಿರುವ ಕ್ಯಾಪ್ಶನ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. “To The Most Beautiful Bonds” ಎಂದು ಬರೆದುಕೊಂಡಿರುವ ರಾಗಿಣಿ, ಅದರ ಜೊತೆಗೆ ಬೆಸ್ಟ್ ಫ್ರೆಂಡ್ ಆಫ್ ದಿ ಇಯರ್ ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಸಿದ್ದಾರೆ. ಆದರೂ ಫೋಟೋದಲ್ಲಿ ಇವರಿಬ್ಬರ ಆಪ್ತತೆಯನ್ನು ಕಂಡ ನೆಟ್ಟಿಗರು, “ಇವರೇನಾ ನಮ್ಮ ಭಾವ?” , “ಕೊನೆಗೂ ಬಾವನನ್ನು ಪರಿಚಯ ಮಾಡಿಕೊಟ್ಟಿದ್ದೀರಾ?” ಎಂದೆಲ್ಲಾ ಕಾಮೆಂಟ್ ಮಾಡುತ್ತಾ ಕಾಲೆಳೆಯುತ್ತಿದ್ದಾರೆ.

ಹಿಂದೆ ನಟ ರಾಜವರ್ಧನ್ ಜೊತೆಗೂ ರಾಗಿಣಿ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಒಟ್ಟಿಗೆ ಸುತ್ತುತ್ತಿದ್ದಾರೆ, ಇವರ ನಡುವೆ ಪ್ರೀತಿ ಇದೆ ಎನ್ನುವ ಗಾಸಿಪ್‌ಗಳು ಹರಡಿದ್ದವು. ಆದರೆ ರಾಜವರ್ಧನ್ ಅವುಗಳನ್ನು ತಳ್ಳಿಹಾಕಿ ತಾವು ಕೇವಲ ಗೆಳೆಯರು ಎಂದು ಸ್ಪಷ್ಟಪಡಿಸಿದ್ದರು. ಸದ್ಯ ರಾಗಿಣಿ ಅವರು ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಜು ವೆಡ್ಸ್ ಗೀತಾ 2, ಗಜರಾಮ, ವೃಷಭ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಾಗಿಣಿ, ಈಗಿನ ಈ ವೈರಲ್ ಫೋಟೋಗಳ ಬಗ್ಗೆ ಇದುವರೆಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.


