
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದು, ಮುಚ್ಚಲ್ಪಟ್ಟಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಮುಕ್ತಗೊಳಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ. ತಮ್ಮ ‘ಟ್ರೂಥ್ ಸೋಶಿಯಲ್’ ಪೋಸ್ಟ್‌ನಲ್ಲಿ ಇರಾನ್‌ಗೆ ನೇರ ಎಚ್ಚರಿಕೆ ನೀಡಿರುವ ಅವರು, ಒಂದು ವೇಳೆ ಜಲಸಂಧಿಯನ್ನು ವ್ಯವಹಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನಿನ ಎಲ್ಲಾ ವಿದ್ಯುತ್ ಉತ್ಪಾದನಾ ಸ್ಥಾವರಗಳು, ತೈಲ ಬಾವಿಗಳು ಮತ್ತು ಪ್ರಮುಖ ಖಾರ್ಗ್ ದ್ವೀಪವನ್ನು ಸ್ಫೋಟಿಸಿ ಸಂಪೂರ್ಣವಾಗಿ ನಾಶಮಾಡುವುದಾಗಿ ಹೇಳಿದ್ದಾರೆ. ಇರಾನ್ ವಿರುದ್ಧದ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಆಡಳಿತವು ಗಂಭೀರವಾಗಿ ಪ್ರಯತ್ನಿಸುತ್ತಿದ್ದರೂ, ಇರಾನ್ ಶೀಘ್ರವಾಗಿ ಒಪ್ಪಂದಕ್ಕೆ ಬರದಿದ್ದರೆ ಆ ದೇಶದ ಮೂಲಸೌಕರ್ಯಗಳನ್ನೇ ಧ್ವಂಸಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಕಳೆದ 47 ವರ್ಷಗಳಿಂದ ಇರಾನಿನ ಭಯೋತ್ಪಾದನಾ ಆಡಳಿತದಿಂದಾಗಿ ಅಮೆರಿಕದ ಸೈನಿಕರು ಮತ್ತು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಈ ದಾಳಿ ನಡೆಸಲಾಗುವುದು ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಈವರೆಗೂ ಇಂತಹ ಪ್ರಮುಖ ತೈಲ ಮತ್ತು ವಿದ್ಯುತ್ ಘಟಕಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿಲ್ಲವಾದರೂ, ಇನ್ನು ಮುಂದೆ ಅಂತಹ ರಿಯಾಯಿತಿ ಇರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಟ್ರಂಪ್ ಅವರ ಈ ಎಚ್ಚರಿಕೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದು ಕೇವಲ ಯುದ್ಧದ ಭೀತಿಯಲ್ಲದೆ, ಜಾಗತಿಕ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.




