ಮೈಸೂರು ; ಮೈಸೂರು ನಗರ ಪೊಲೀಸ್ ಆಯುಕ್ತರ ಹಳೆ ಕಚೇರಿ ಇನ್ನು ಮುಂದೆ ಕರ್ನಾಟಕ ಪೊಲೀಸ್ ಬ್ಯಾಂಡ್ ಮ್ಯೂಸಿಯಂ ಆಗಿ ಕಾರ್ಯ ನಿರ್ವಹಿಸಲಿದೆ. ಪಾರಂಪರಿಕ ಶೈಲಿಯಲ್ಲಿರುವ ಹಳೆಯ ಕಟ್ಟಡವನ್ನು 64 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಶೀಘ್ರವೇ ಉದ್ಘಾಟನೆಯಾಗಲಿದೆ.
ಹಿಂದೆ ಈ ಕಟ್ಟಡದಲ್ಲಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಡಿಸಿಪಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಹೊಸ ಕಟ್ಟಡಕ್ಕೆ ಆಯುಕ್ತರ ಕಚೇರಿ ಸಂಪೂರ್ಣ ಸ್ಥಳಾಂತರಗೊಂಡಿತ್ತು. ಬಳಿಕ ಖಾಲಿ ಇದ್ದ ಹಳೆಯ ಕಟ್ಟಡವನ್ನು ಆರ್‌ಬಿಐ ನೋಟು ಮುದ್ರಣಾಲಯದ ಸಿಎಸ್‌ಆರ್ ಅನುದಾನದಿಂದ ನವೀಕರಣ ಕಾಮಗಾರಿ ನಡೆಸಲಾಗಿದ್ದು, ಈಗ ಪೂರ್ಣಗೊಂಡಿದೆ.
ಮಹಾರಾಜರ ಕಾಲದಲ್ಲಿ ಈ ಕಟ್ಟಡದಲ್ಲಿ ಪೊಲೀಸ್ ವಾದ್ಯಗಳು ಮತ್ತು ಸಲಕರಣಿಗಳನ್ನು ಇರಿಸಲಾಗಿತ್ತು. ನಂತರ ಮೌಂಟೆಂಡ್ ಪೊಲೀಸ್‌ನ ಕಟ್ಟಡಕ್ಕೆ ಪೊಲೀಸ್ ಬ್ಯಾಂಡ್‌ನ ವಾದ್ಯಗಳನ್ನು ಸ್ಥಳಾಂತರಿಸಲಾಗಿತ್ತು. ಈಗ ನವೀಕರಣಗೊಂಡ ಕಟ್ಟಡ ಬ್ಯಾಂಡ್ ಹೌಸ್ ಆಗಿ ಸಂಪೂರ್ಣವಾಗಿ ಪರಿವರ್ತನೆಯಾಗಲಿದ್ದು, ಪ್ರವಾಸಿಗರನ್ನು ಸೆಳೆಯಲಿದೆ.