Top Newsಜಿಲ್ಲೆರಾಜಕೀಯರಾಜ್ಯ

ಸಿದ್ದಾಪುರ ಹತ್ಯೆ ಕೇಸ್‌ಗೆ ರಾಜಕೀಯ ಬಣ್ಣ; ಬಿಜೆಪಿ ನಾಯಕರ ಜೊತೆ ಆರೋಪಿಯ ಫೋಟೋ ವೈರಲ್

ಉತ್ತರ ಕನ್ನಡ: ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಹತ್ಯೆ ಪ್ರಕರಣ ಈಗ ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿದೆ. ಜ್ಯೋತಿಷಿ ಕಮಲಾಕರ ಭಟ್ ಮತ್ತು ವಿವಾಹಿತ ಮಹಿಳೆ ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಈಗ ಬಿಜೆಪಿ ನಾಯಕರ ನಂಟು ಬೆಸೆದಿರುವುದು ಚರ್ಚೆಗೆ ಕಾರಣವಾಗಿದೆ.

ಕೊಲೆ ಆರೋಪಿ ಕಮಲಾಕರ ಭಟ್, ಬಿಜೆಪಿಯ ರಾಜ್ಯ ನಾಯಕರಾದ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಬಿಜೆಪಿಗೆ ಮುಜುಗರ ತಂದಿಟ್ಟಿದ್ದು, ಕಾಂಗ್ರೆಸ್‌ಗೆ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದು, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ:

ಈ ಕೊಲೆ ಪ್ರಕರಣದಲ್ಲಿ ಶಾಸಕ ಸುರೇಶ್ ಕುಮಾರ್ ಅಂತಹವರ ಪಾತ್ರವೂ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಜನರ ಮೂಢನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಅಕ್ರಮ ದಂಧೆ ನಡೆಸುತ್ತಿದ್ದ ಕಮಲಾಕರ ಭಟ್‌ನನ್ನು ‘ಸಜ್ಜನ ಶಾಸಕ’ ಬಿರುದಾಂಕಿತ ಸುರೇಶ್ ಕುಮಾರ್ ಬೆನ್ನುತಟ್ಟಿ ಬೆಳೆಸಿದ್ದಾರೆ ಎಂದು ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.

ಈ ರಾಜಕೀಯ ಕೆಸರೆರಾಟದ ನಡುವೆ, ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಪ್ರಭಾವಿಗಳ ಹಸ್ತಕ್ಷೇಪವಿಲ್ಲದೆ ನ್ಯಾಯಯುತ ತನಿಖೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Comments (0)

Your email address will not be published. Required fields are marked *

Back to top button