ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಾಧಿಕ್ ಪೈಲ್ವಾನ್ ಕೆಂಡಾಮಂಡಲ!

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಾಮನೂರು ಕುಟುಂಬದ ವಾರಸುದಾರನಿಗೆ ಅಲ್ಪಸಂಖ್ಯಾತ ನಾಯಕರ ಬಂಡಾಯದ ಬಿಸಿ ತಟ್ಟಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ ಪುತ್ರ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಹೈಕಮಾಂಡ್ನಿಂದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಪ್ರವೇಶ ಪಡೆದಿದ್ದಾರೆ. ವಿಶೇಷವೆಂದರೆ, ಪಕ್ಷದ ಅಧಿಕೃತ ಘೋಷಣೆಗೂ ಮುನ್ನವೇ ಸಮರ್ಥ್ ನಾಮಪತ್ರ ಸಲ್ಲಿಸುವ ಮೂಲಕ ಅಖಾಡ ಸಿದ್ಧಪಡಿಸಿಕೊಂಡಿದ್ದರು.
ಆದರೆ, ಈ ಬೆಳವಣಿಗೆಯು ಕ್ಷೇತ್ರದ ಮುಸ್ಲಿಂ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಈ ಬಾರಿ ತಮ್ಮ ಸಮುದಾಯದ ಅಭ್ಯರ್ಥಿಗೇ ಟಿಕೆಟ್ ನೀಡಬೇಕೆಂದು ಮುಖಂಡರು ಮೊದಲಿನಿಂದಲೂ ಪಟ್ಟು ಹಿಡಿದಿದ್ದರು. ಈಗ ಶಾಮನೂರು ಕುಟುಂಬದ ಮೂರನೇ ತಲೆಮಾರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಸಾಧಿಕ್ ಪೈಲ್ವಾನ್ ಬಂಡಾಯದ ಬಾವುಟ ಹಾರಿಸಿದ್ದಾರೆ. “ಪಕ್ಷವು ನನಗೆ ಟಿಕೆಟ್ ನೀಡುವುದಾಗಿ ನಂಬಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟಿದೆ, ಹೀಗಾಗಿ ನಾನು ಪಕ್ಷದ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ” ಎಂದು ಕಿಡಿಕಾರಿದ್ದಾರೆ.
ಬಂಡಾಯದ ಕಿಚ್ಚು ಕೇವಲ ಸಾಧಿಕ್ ಪೈಲ್ವಾನ್ ಅವರಿಗೆ ಸೀಮಿತವಾಗಿಲ್ಲ; ಅಲ್ಪಸಂಖ್ಯಾತ ಘಟಕದ ಮಾಜಿ ಕಾರ್ಯದರ್ಶಿ ಟಿ. ಶಫೀಉಲ್ಲಾ ಕೂಡ ಪಕ್ಷದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿರುವ ಅಲ್ಪಸಂಖ್ಯಾತರಿಗೆ ಈ ಬಾರಿ ಅನ್ಯಾಯ ಮಾಡಲಾಗಿದೆ ಮತ್ತು ಲಿಂಗಾಯತ ಸಮುದಾಯಕ್ಕೆ ಸತತವಾಗಿ ಮಣೆ ಹಾಕಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಭಿನ್ನಾಭಿಪ್ರಾಯಗಳು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮತಗಳ ವಿಭಜನೆಯ ಭೀತಿ ಎದುರಾಗಿದೆ.
ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ಮತ್ತು ಪ್ರಭಾವ ದೊಡ್ಡದಿದ್ದರೂ, ಮುಸ್ಲಿಂ ಮತಗಳ ಧ್ರುವೀಕರಣವು ಚುನಾವಣೆಯ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಈ ಬಂಡಾಯವನ್ನು ಶಮನಗೊಳಿಸಲು ಯಾವ ತಂತ್ರ ರೂಪಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಒಂದು ವೇಳೆ ಅಲ್ಪಸಂಖ್ಯಾತ ನಾಯಕರು ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, ಅದು ಸಮರ್ಥ್ ಮಲ್ಲಿಕಾರ್ಜುನ್ ಅವರ ಮೊದಲ ಚುನಾವಣಾ ಹಾದಿಯನ್ನು ಕಠಿಣಗೊಳಿಸಬಹುದು ಎಂದು ಅಂದಾಜಿಸಲಾಗಿದೆ.




