
ಬೆಂಗಳೂರು: ಆಟೋಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ನಗರದ ‘ಪ್ರಿಮಿಯಂ ಆಟೋ’ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪ್ರಯಾಣಿಕರಿಗೆ ವಿಮಾನ ಅಥವಾ ಹೈಟೆಕ್ ಕಾರುಗಳ ಮಾದರಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಓಲಾ, ಉಬರ್‌ನಂತಹ ಆ್ಯಪ್‌ಗಳಲ್ಲಿ ಪ್ರಿಮಿಯಂ ಕ್ಯಾಬ್‌ಗಳನ್ನು ನೋಡಿದ್ದೇವೆ, ಆದರೆ ಆಟೋದಲ್ಲಿ ಇಂತಹ ಅಪ್‌ಗ್ರೇಡ್ ಸೌಲಭ್ಯ ಲಭ್ಯವಿರುವುದು ಬೆಂಗಳೂರಿಗರಿಗೆ ಅಚ್ಚರಿ ಮೂಡಿಸಿದೆ.

ಈ ವಿಶಿಷ್ಟ ಪ್ರಿಮಿಯಂ ಆಟೋದಲ್ಲಿ ಪ್ರಯಾಣಿಸುವವರು ತಮ್ಮ ಸಾದಾ ಪ್ರಯಾಣವನ್ನು ತುಸು ಹೆಚ್ಚಿನ ಹಣ ಪಾವತಿಸಿ ಉನ್ನತ ದರ್ಜೆಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಬೇಸಿಗೆಯ ಉರಿ ಬಿಸಿಲಿನಿಂದ ತತ್ತರಿಸುವ ಪ್ರಯಾಣಿಕರಿಗಾಗಿ ಈ ಆಟೋ ಚಾಲಕ ‘ಸ್ಮಾರ್ಟ್’ ಐಡಿಯಾವೊಂದನ್ನು ಜಾರಿಗೆ ತಂದಿದ್ದಾನೆ. ಆಟೋ ಹತ್ತಿದ ತಕ್ಷಣ ಪ್ರಯಾಣಿಕರ ಮುಂದೆ ಸೌಲಭ್ಯಗಳ ಪಟ್ಟಿಯನ್ನೇ ಇಡಲಾಗುತ್ತದೆ. ಇದರಲ್ಲಿ ತಂಪು ಪಾನೀಯದಿಂದ ಹಿಡಿದು ಫ್ಯಾನ್ ಸೌಲಭ್ಯದವರೆಗೆ ಎಲ್ಲವೂ ಲಭ್ಯವಿದೆ.

ಸೌಲಭ್ಯಗಳ ದರ ಪಟ್ಟಿಯ ಪ್ರಕಾರ, ಪ್ರಯಾಣದ ಅವಧಿಯಲ್ಲಿ 30 ನಿಮಿಷಗಳ ಕಾಲ ವೈಯಕ್ತಿಕ ಫ್ಯಾನ್ ಸೌಲಭ್ಯ ಬೇಕಿದ್ದರೆ ಪ್ರಯಾಣಿಕರು 10 ರೂಪಾಯಿ ಪಾವತಿಸಬೇಕು. ಹಾಗೆಯೇ, ಬಾಯಾರಿಕೆಯಾದಲ್ಲಿ 500 ಎಂಎಲ್ ತಂಪು ನೀರಿನ ಬಾಟಲಿಗೆ 12 ರೂಪಾಯಿ ದರ ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಮೊಬೈಲ್ ಚಾರ್ಜಿಂಗ್ ಮಾಡಲು ಯಾವುದೇ ಪಿನ್ ಅಥವಾ ಯುಎಸ್‌ಬಿ ಕೇಬಲ್ ಬಳಸಿದರೂ ಅದು ಸಂಪೂರ್ಣ ಉಚಿತವಾಗಿದೆ. ಶಾಗುನ್ ಒಹ್ರಿ ಎಂಬ ಯುವತಿ ಈ ಪ್ರಿಮಿಯಂ ಆಟೋದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ.
ನಗರದ ತೀವ್ರ ಪೈಪೋಟಿಯ ನಡುವೆ ಜನರ ನಾಡಿಮಿಡಿತ ಅರಿತು ಇಂತಹ ವಿನೂತನ ಸೇವೆ ನೀಡುತ್ತಿರುವ ಆಟೋ ಚಾಲಕನಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಪೀಕ್ ಬೆಂಗಳೂರು” ಕ್ಷಣಗಳಿಗೆ ಇದು ಮತ್ತೊಂದು ಸೇರ್ಪಡೆಯಾಗಿದ್ದು, ಉರಿ ಬಿಸಿಲಿನಲ್ಲಿ ತಣ್ಣನೆಯ ಗಾಳಿ ಮತ್ತು ನೀರು ಸಿಗುವುದಾದರೆ ಸ್ವಲ್ಪ ಹೆಚ್ಚು ಹಣ ನೀಡಲು ಪ್ರಯಾಣಿಕರು ಸಿದ್ಧರಿದ್ದಾರೆ ಎಂಬುದು ಈ ಚಾಲಕನ ಯಶಸ್ಸಿನ ಮಂತ್ರವಾಗಿದೆ.




