Tuesday, March 3, 2026
20.8 C
Bengaluru
Google search engine
LIVE
ಮನೆ#Exclusive NewsTop Newsಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಧ್ವಂಸ; ಪಾಕ್ ಸೇನೆ ತತ್ತರ!

ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಧ್ವಂಸ; ಪಾಕ್ ಸೇನೆ ತತ್ತರ!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧವಾಗಿ ಮಾರ್ಪಟ್ಟಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ಪಾಕಿಸ್ತಾನದ ಆಯಕಟ್ಟಿನ ಮಿಲಿಟರಿ ತಾಣಗಳ ಮೇಲೆ ವಿನಾಶಕಾರಿ ದಾಳಿ ನಡೆಸಿವೆ. ರಾವಲ್ಪಿಂಡಿಯ ಚಕ್ಲಾದಲ್ಲಿರುವ ಪಾಕಿಸ್ತಾನದ ಅತ್ಯಂತ ಪ್ರಮುಖ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಅಫ್ಘಾನ್ ಪಡೆಗಳು ಡ್ರೋಣ್ ಪ್ರಹಾರ ನಡೆಸಿವೆ. ವಿಶೇಷವೆಂದರೆ, ಈ ಹಿಂದೆ ನಡೆದಿದ್ದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ನಂತರವಷ್ಟೇ ದುರಸ್ತಿಯಾಗಿದ್ದ ಈ ವಾಯುನೆಲೆ, ಅಫ್ಘಾನ್ ದಾಳಿಯಿಂದಾಗಿ ಮತ್ತೆ ದೊಡ್ಡ ಮಟ್ಟದ ಹಾನಿಯನ್ನು ಅನುಭವಿಸಿದೆ. ಕಾಬೂಲ್ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ್ದ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಫ್ಘಾನಿಸ್ತಾನ ಈ ಆಕ್ರಮಣಕಾರಿ ಹೆಜ್ಜೆಯನ್ನು ಇಟ್ಟಿದೆ.

ಅಫ್ಘಾನ್ ಪಡೆಗಳ ಅಬ್ಬರ ಕೇವಲ ವಾಯುನೆಲೆಗೆ ಸೀಮಿತವಾಗದೆ, ಪಾಕಿಸ್ತಾನದ ಸೇನಾ ಶಕ್ತಿಯ ಕೇಂದ್ರಗಳಾದ ಖ್ವೆಟ್ಟಾದ 12ನೇ ಸೇನಾ ಡಿವಿಷನ್ ಪ್ರಧಾನ ಕಚೇರಿ ಮತ್ತು ಖ್ವಾಜೈ ಮಿಲಿಟರಿ ಶಿಬಿರದ ಮೇಲೂ ವ್ಯಾಪಿಸಿದೆ. ಸುಮಾರು 2,600 ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿರುವ ಎರಡೂ ರಾಷ್ಟ್ರಗಳ ನಡುವೆ ಈಗ ರಣರಂಗ ನಿರ್ಮಾಣವಾಗಿದೆ. ಗಡಿಯಲ್ಲಿನ 53ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳ ಮೇಲೆ ಅಫ್ಘಾನ್ ಪಡೆಗಳು ಏಕಕಾಲದಲ್ಲಿ ದಾಳಿ ಮಾಡಿ ಪಾಕ್ ಸೇನೆಗೆ ತಲ್ಲಣ ಮೂಡಿಸಿವೆ. ಅಫ್ಘಾನಿಸ್ತಾನದ ಈ ಮಿಂಚಿನ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವು ‘ಗಜಬ್ ಲಿಲ್ ಹಕ್’ ಎಂಬ ಕಾರ್ಯಾಚರಣೆಯನ್ನು ಘೋಷಿಸುವ ಮೂಲಕ ಮರುದಾಳಿ ಆರಂಭಿಸಿದೆ.

ಈ ಭೀಕರ ಕದನದಲ್ಲಿ ಉಭಯ ದೇಶಗಳ ಶಸ್ತ್ರಾಸ್ತ್ರಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 185 ಟ್ಯಾಂಕ್‌ಗಳು ಮತ್ತು ದೊಡ್ಡ ಪ್ರಮಾಣದ ಫಿರಂಗಿ ಬಂದೂಕುಗಳು ನಾಶವಾಗಿವೆ. ಪಾಕಿಸ್ತಾನದ ಪ್ರಮುಖ ಮಿಲಿಟರಿ ತಾಣಗಳನ್ನೇ ಧ್ವಂಸ ಮಾಡುತ್ತಿರುವ ತಾಲಿಬಾನ್, ಇದು ಕೇವಲ ಆರಂಭ ಮಾತ್ರವಾಗಿದ್ದು ಮುಂದೆ ಇನ್ನು ಭಯಂಕರವಾದ ದಾಳಿಗಳನ್ನು ನಡೆಸುವುದಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಈ ಘಟನೆಯಿಂದಾಗಿ ದಕ್ಷಿಣ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಗಡಿ ಭಾಗದ ಜನರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments