bengaluruರಾಜ್ಯಸುದ್ದಿ

ಆಟೋ ಚಾಲಕರ ರಕ್ತ ಹರಿಸ್ತಿದೆಯೇ ಗ್ಯಾಸ್ ಮಾಫಿಯಾ..?

ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿ ಆಟೋ ಚಾಲಕರು ಎಲ್‌ಪಿಜಿ ಗ್ಯಾಸ್‌ಗಾಗಿ ಅನುಭವಿಸುತ್ತಿರುವ ನರಕಯಾತನೆಯು ಮನುಕುಲವೇ ತಲೆತಗ್ಗಿಸುವಂತಿದೆ. ಸುಡುವ ಬಿಸಿಲಿನಲ್ಲಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಚಾಲಕರ ಪಾದದ ಚರ್ಮವೇ ಕಿತ್ತುಬಂದಿದ್ದು, ರಕ್ತ ಸುರಿಯುತ್ತಿದ್ದರೂ ಹೊಟ್ಟೆಪಾಡಿಗಾಗಿ ಕ್ಯೂ ಬಿಟ್ಟು ಕದಲದ ಸ್ಥಿತಿ ನಿರ್ಮಾಣವಾಗಿದೆ. ನವಾಜ್ ಎಂಬ ಚಾಲಕ ತನ್ನ ಬೆಂದ ಪಾದಗಳನ್ನು ತೋರಿಸಿ ರಸ್ತೆಯಲ್ಲೇ ಕಣ್ಣೀರಿಟ್ಟಿರುವುದು ಅಲ್ಲಿನ ಭೀಕರತೆಗೆ ಸಾಕ್ಷಿಯಾಗಿದೆ. ಗ್ಯಾಸ್ ಸಿಗದಿದ್ದರೆ ಜೀವನೋಪಾಯವೇ ಇಲ್ಲದಂತಾಗಿರುವ ಬಡ ಚಾಲಕರು, “ನಮ್ಮನ್ನು ಇಲ್ಲೇ ಕೊಂದುಬಿಡಿ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಗರದ ರಸ್ತೆಗಳಲ್ಲಿ ಬಡವರ ರಕ್ತ ಹರಿಯುತ್ತಿದ್ದರೂ ಸರ್ಕಾರ ಮತ್ತು ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗ್ಗೆ 6 ಗಂಟೆಯಿಂದಲೇ ಗ್ಯಾಸ್‌ಗಾಗಿ ಪರದಾಡುತ್ತಿರುವ ಚಾಲಕರು, ಇಂಧನವಿಲ್ಲದೆ ಆಟೋಗಳನ್ನು ರಸ್ತೆಯಲ್ಲೇ ತಳ್ಳಿಕೊಂಡು ಹೋಗುವ ಪರಿಸ್ಥಿತಿ ಬಂದೊದಗಿದೆ. ಐಒಸಿಎಲ್‌ನಲ್ಲಿ ಸ್ಟಾಕ್ ಲಭ್ಯವಿದ್ದರೂ ನಗರದ ಬಂಕ್‌ಗಳಲ್ಲಿ ಗ್ಯಾಸ್ ಮಾಯವಾಗುತ್ತಿರುವುದು ಕೃತಕ ಅಭಾವದ ಸಂಶಯವನ್ನು ಬಲಪಡಿಸಿದೆ. ಇದರ ನಡುವೆ ಗ್ಯಾಸ್ ಮಾಫಿಯಾ ಒಂದು ಕೆಜಿ ಗ್ಯಾಸ್‌ಗೆ 90 ರೂ.ನಿಂದ 120 ರೂ.ವರೆಗೆ ಹಣ ವಸೂಲಿ ಮಾಡುವ ಮೂಲಕ ಚಾಲಕರ ರಕ್ತ ಹೀರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರುತ್ತಿದ್ದು, ಸತ್ತಂತಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಚಾಲಕರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.

Comments (0)

Your email address will not be published. Required fields are marked *

Back to top button