bengaluruಜಿಲ್ಲೆ

ಗಂಗೊಂಡನಹಳ್ಳಿ ಮಹಿಳೆ ಹತ್ಯೆ ಪ್ರಕರಣ, ಹಂತಕ ಹಫೀಜ್ ಅರೆಸ್ಟ್!

ಬೆಂಗಳೂರು: ಗಂಗೊಂಡನಹಳ್ಳಿಯಲ್ಲಿ ನಡೆದ ವಿವಾಹಿತ ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಫೀಜ್‌ನನ್ನು ಬಂಧಿಸಿದ್ದಾರೆ. ಮೃತ ಫಿರ್ದೋಸ್ ಬಾನು ಎಂಬಾಕೆಯನ್ನು ಆರೋಪಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ತನಿಖೆಯ ಪ್ರಕಾರ, ಮೃತ ಮಹಿಳೆ ಮತ್ತು ಆರೋಪಿ ಹಫೀಜ್ ನಡುವೆ ಈ ಹಿಂದೆ ಸಂಬಂಧವಿತ್ತು. ಇಬ್ಬರಿಗೂ ಪ್ರತ್ಯೇಕವಾಗಿ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ. ಆದರೆ, ಇತ್ತೀಚೆಗೆ ಫಿರ್ದೋಸ್ ಬಾನು ಆರೋಪಿಯಿಂದ ದೂರವಾಗಲು ನಿರ್ಧರಿಸಿದ್ದರು. ಈ ವಿಚಾರವಾಗಿ ಫೆಬ್ರವರಿ 28ರಂದು ಗಲಾಟೆ ನಡೆದಾಗ, ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆಸಿ ಮುಚ್ಚಳಿಕೆ ಬರೆಸಿಕೊಡಲಾಗಿತ್ತು. ಆದರೂ ಆರೋಪಿ ಹಫೀಜ್ ಮಹಿಳೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದಾನೆ.

ನಿನ್ನೆ ಸಂಜೆ ಫಿರ್ದೋಸ್ ಬಾನು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಫೀಜ್ ದಾರಿಯಲ್ಲೇ ಅಡ್ಡಗಟ್ಟಿ ಡ್ಯಾಗರ್‌ನಿಂದ ಆರೇಳು ಬಾರಿ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪಶ್ಚಿಮ ವಲಯ ಡಿಸಿಪಿ ಯತೀಶ್ ಮಾಹಿತಿ ನೀಡಿದ್ದಾರೆ.ಆರೋಪಿ ಯಾವುದೇ ಕೆಲಸಕ್ಕೆ ಹೋಗದೆ ಅಲೆದಾಡುತ್ತಿದ್ದ ಎನ್ನಲಾಗಿದ್ದು, ಪ್ರಸ್ತುತ ಚಂದ್ರಾಲೇಔಟ್ ಪೊಲೀಸರು ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ವೈಯಕ್ತಿಕ ಸಂಬಂಧದ ಕಡಿತವೇ ಈ ಭೀಕರ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

Comments (0)

Your email address will not be published. Required fields are marked *

Back to top button