ದೇಶ/ವಿದೇಶ

ಆರ್​ಬಿಐನಿಂದ ಗುಡ್​ನ್ಯೂಸ್​..!

ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಮೊನ್ನೆ ಮತ್ತು ನಿನ್ನೆ ನಡೆದ ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಮಿಟಿ ನಿರ್ಧಾರಗಳನ್ನು ಪ್ರಕಟಿಸುತ್ತಾ, ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದನ್ನು ತಿಳಿಸಿದರು. ಆರ್​​ಬಿಐನಿಂದ ಇದು ಸತತ ಎರಡನೇ ರಿಪೋ ದರ ಇಳಿಕೆ ಆಗಿದೆ. ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಿಪೋ ದರ ಎಂದರೇನು..?
ರಿಪೋ ರೇಟ್ ಎಂದರೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ ಎಂದಿದೆ. ಇಲ್ಲಿ ಬ್ಯಾಂಕುಗಳಿಗೆ ಫಂಡಿಂಗ್ ಅವಶ್ಯಕತೆ ಬಿದ್ದಾಗ ಅವರು ಸರ್ಕಾರಿ ಬಾಂಡ್​​ಗಳನ್ನು ಆರ್​​ಬಿಐನಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ, ಅಡವಿಡಲಾದ ಬಾಂಡ್ ಅಥವಾ ಸೆಕ್ಯೂರಿಟಿಗಳನ್ನು ಪೂರ್ವನಿಗದಿತ ದರಕ್ಕೆ ಮರುಖರೀದಿ ಮಾಡಲಾಗುವುದೆಂದು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ ಎಂದು ಕರೆಯುವುದು.ಸರಳವಾಗಿ ತಿಳಿಸುವುದಾದರೆ, ಆರ್​​ಬಿಐನಿಂದ ಸಾಲ ಪಡೆಯಲು ಬ್ಯಾಂಕುಗಳು ತೆರಬೇಕಿರುವ ಬಡ್ಡಿದರವೇ ರಿಪೋ ರೇಟ್. ಹಣದುಬ್ಬರವನ್ನು ನಿಯಂತ್ರಿಸಲು ಆರ್​​ಬಿಐ ಬಳಿ ಇರುವ ಪ್ರಬಲ ಅಸ್ತ್ರ ಇದು.

ಬೆಲೆ ಏರಿಕೆ ಆಗುತ್ತಿದೆ ಎನಿಸಿದರೆ ಆಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಡಿಮೆ ಮಾಡಲು ಆರ್​​ಬಿಐ ರಿಪೋ ದರವನ್ನು ಹೆಚ್ಚಿಸುತ್ತದೆ. ಹಣದುಬ್ಬರ ನಿಯಂತ್ರಣದಲ್ಲಿದ್ದರೆ, ಮತ್ತು ಆರ್ಥಿಕತೆಗೆ ಪುಷ್ಟಿ ಸಿಗುವ ಅವಶ್ಯಕತೆ ಇದೆ ಎನಿಸಿದಲ್ಲಿ ಆಗ ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಹಣದ ಹರಿವು ಬೇಕಾಗುತ್ತದೆ. ಆಗ ರಿಪೋ ದರವನ್ನು ಆರ್​​ಬಿಐ ಇಳಿಸುತ್ತದೆ.ಸಂಜಯ್ ಮಲ್ಹೋತ್ರಾ ಅವರು ಆರ್​​ಬಿಐ ಗವರ್ನರ್ ಆಗಿ ನೇಮಕವಾದ ಬಳಿಕ ಇದು ಎರಡನೇ ಎಂಪಿಸಿ ಸಭೆಯಾಗಿದೆ. ಹೊಸ ಹಣಕಾಸು ವರ್ಷದ ಮೊದಲ ಎಂಪಿಸಿ ಸಭೆಯೂ ಇದಾಗಿದೆ. ಜಾಗತಿಕ ಅನಿಶ್ಚಿತ ಸ್ಥಿತಿ, ಸುಂಕ ಸಮರದ ಈ ಕಾಲಘಟ್ಟದಲ್ಲಿ ಆರ್​​ಬಿಐ ನೀತಿ ನಿರ್ಧಾರಕ್ಕೆ ಸಾಕಷ್ಟು ಸವಾಲಿನ ಸ್ಥಿತಿ ಇದೆ.ರಿಪೋ ದರ ಕಡಿತಗೊಳಿಸುವ ಜೊತೆಗೆ, ಎಸ್​​ಡಿಎಫ್ ಮತ್ತು ಎಂಎಸ್​​ಎಫ್ ದರಗಳನ್ನೂ ತುಸು ಇಳಿಸಲಾಗಿದೆ. ಪಾಲಿಸಿ ನಿಲುವನ್ನು ನ್ಯೂಟ್ರಲ್​​ನಿಂದ ಅಕಾಮೊಡೇಟಿವ್​​ಗೆ ಬದಲಿಸಲಾಗಿದೆ.

Comments (0)

Your email address will not be published. Required fields are marked *

Back to top button