ರಾಜ್ಯಸುದ್ದಿ

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಕಂದಮ್ಮಗಳ ದಾರುಣ ಸಾವು..!

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಶನಿವಾರ ಅತ್ಯಂತ ಕರುಣಾಜನಕ ಘಟನೆಯೊಂದು ನಡೆದಿದ್ದು, ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಪುಟಾಣಿ ಮಕ್ಕಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಕಿರಣ್ (6), ಬಸಮ್ಮ (11), ಶರತ್ (6) ಮತ್ತು ಹನುಮೇಶ್ (7) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಈ ಮಕ್ಕಳು ಆಟವಾಡುತ್ತಾ ಈಜಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದರು. ಆದರೆ ನೀರಿನ ಆಳ ಅರಿಯದೇ ಈ ದುರಂತ ಸಂಭವಿಸಿದೆ.

ಒಂದೇ ಗ್ರಾಮದ ನಾಲ್ವರು ಕಂದಮ್ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ನಗನೂರು ಗ್ರಾಮದಲ್ಲಿ ಶೋಕ ಸಾಗರ ಆವರಿಸಿದೆ. ಈ ಘಟನೆಯು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದ ಕೃಷಿ ಹೊಂಡಗಳು ಗ್ರಾಮೀಣ ಭಾಗದ ಮಕ್ಕಳ ಪಾಲಿಗೆ ಮೃತ್ಯುಕೂಪಗಳಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Comments (0)

Your email address will not be published. Required fields are marked *

Back to top button