Top Newsದೇಶ/ವಿದೇಶರಾಜ್ಯಸುದ್ದಿ

ಉಧಂಪುರದಲ್ಲಿ ಭೀಕರ ಕಾಳಗ;ಡ್ರೋನ್ ದಾಳಿಗೆ ಬೆದರಿದ ಉಗ್ರರು, ರಾಕೆಟ್ ಲಾಂಚರ್‌ಗೆ ಉಡೀಸ್

ಜಮ್ಮು ಮತ್ತು ಕಾಶ್ಮೀರ: ಉಧಂಪುರ ಜಿಲ್ಲೆಯ ಮಜಾಲ್ತಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಯಶಸ್ವಿಯಾಗಿ ಸದೆಬಡಿಯಲಾಗಿದೆ. ಹತರಾದ ಭಯೋತ್ಪಾದಕರನ್ನು ಜಬ್ಬಾರ್ ಮತ್ತು ಮಾವಿ ಎಂದು ಗುರುತಿಸಲಾಗಿದ್ದು, ಇವರು ಈ ಭಾಗದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಗುಹೆಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆಯು ಆಧುನಿಕ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡಿತ್ತು. ಸ್ಥಳವನ್ನು ಪತ್ತೆಹಚ್ಚಿದ ನಂತರ ರಾಕೆಟ್ ಲಾಂಚರ್‌ಗಳ ಮೂಲಕ ದಾಳಿ ನಡೆಸಿ ಉಗ್ರರನ್ನು ನಿಷ್ಕ್ರಿಯಗೊಳಿಸಲಾಗಿದೆ.

ಈ ಕಾರ್ಯಾಚರಣೆಯು ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ಸಂಘಟಿತ ಪ್ರಯತ್ನದಿಂದ ನಡೆದಿದ್ದು, ನಮ್ಮ ಭದ್ರತಾ ಪಡೆಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬುದು ಸಮಾಧಾನಕರ ವಿಷಯವಾಗಿದೆ. ಮಜಾಲ್ತಾ ಅರಣ್ಯ ಪ್ರದೇಶವು ಅತ್ಯಂತ ಕಠಿಣ ಭೂಪ್ರದೇಶ ಮತ್ತು ದಟ್ಟವಾದ ಅರಣ್ಯದಿಂದ ಕೂಡಿದ್ದರೂ, ಭದ್ರತಾ ಪಡೆಗಳು ಎದೆಗುಂದದೆ ಕಾರ್ಯಾಚರಣೆ ಪೂರ್ಣಗೊಳಿಸಿವೆ. ಪ್ರಸ್ತುತ ಈ ಪ್ರದೇಶದಲ್ಲಿ ಶೋಧ ಕಾರ್ಯ ಇನ್ನೂ ಮುಂದುವರಿದಿದ್ದು, ಅಡಗಿರಬಹುದಾದ ಇತರೆ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Comments (0)

Your email address will not be published. Required fields are marked *

Back to top button