Top Newsಜಿಲ್ಲೆರಾಜ್ಯಸುದ್ದಿ

ಜ್ಯೋತಿಷಿಯ ಲೀಲೆಗೆ ಬಲಿಯಾಯ್ತು ಜೀವ; ಕುಟುಂಬಕ್ಕೆ 1 ಕೋಟಿ ಪರಿಹಾರ?

ಉತ್ತರ ಕನ್ನಡ: ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಹತ್ಯೆ ಪ್ರಕರಣ ಕೇವಲ ಕ್ರಿಮಿನಲ್ ಕೇಸ್ ಆಗಿ ಉಳಿಯದೆ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆಯಾಗಿ ಬದಲಾಗಿದೆ. ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಈ ಭೀಕರ ಕೊಲೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಸಂತ್ರಸ್ತ ಕುಟುಂಬದ ಆಕ್ರೋಶ ಮತ್ತು ಪ್ರತಿಭಟನೆ ಕೊಲೆಯಾದ ವಸಂತ್ ನಾಯ್ಕ್ ಕುಟುಂಬ ಅತ್ಯಂತ ಬಡತನದಲ್ಲಿದ್ದು, ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡಿದೆ. ಸಿದ್ದಾಪುರದಲ್ಲಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಇದರಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಜ್ಯೋತಿಷಿ ಕಮಲಾಕರ ಭಟ್ ಸಂತ್ರಸ್ತ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರಪಟ್ಟು ಹಿಡಿದಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಾಗ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮಹೇಶ್ ಅವರು ನೀಡಿರುವ ಹೇಳಿಕೆ ಎದೆ ಕಲಕುವಂತಿದೆ. “ನನ್ನನ್ನು ಸಾಯಿಸಲು ಬಂದವರಿಂದ ನನ್ನನ್ನು ಕಾಪಾಡಲು ಹೋದ ನನ್ನ ಅಣ್ಣ ವಸಂತ್ ಬಲಿಯಾದ” ಎಂದು ಕಣ್ಣೀರು ಹಾಕಿದ್ದಾರೆ. ಮಹೇಶ್ ಅವರ ಪತ್ನಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಸುಚಿತ್ರಾ ಮತ್ತು ಆಕೆಯ ತಂದೆ ಲೋಕನಾಥ್ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪೊಲೀಸರು ಈಗಾಗಲೇ ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ಮತ್ತು ಆಕೆಯ ತಂದೆ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಸಂತ್ರಸ್ತ ಕುಟುಂಬ ಒತ್ತಾಯಿಸಿದೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಜ್ಯೋತಿಷಿಯ ಆಸ್ತಿಪಾಸ್ತಿ ಮತ್ತು ಅವರ ಇತರ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments (0)

Your email address will not be published. Required fields are marked *

Back to top button