
ಹುಬ್ಬಳ್ಳಿ: ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಿಮಿಷ್ ಸಂಗಳದ ಸಾವಿಗೆ ಕಾರಣವಾದ ‘ಆ್ಯಕ್ಷನ್ ಬ್ರೇಕ್’ ರೀಲ್ಸ್ ಪ್ರಕರಣದಲ್ಲಿ, ಅಪ್ರಾಪ್ತ ಬಾಲಕ ಮತ್ತು ಆತನ ತಂದೆ ನಾಗರಾಜ್ ರಾಯ್ಕರ್ ಇಬ್ಬರನ್ನೂ ಹುಬ್ಬಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಗೆಳೆಯರ ಗುಂಪು ಸೇರಿಕೊಂಡು ಸೋಷಿಯಲ್ ಮೀಡಿಯಾ ರೀಲ್ಸ್ಗಾಗಿ ವೇಗವಾಗಿ ಬಂದು ದಿಢೀರ್ ಬ್ರೇಕ್ ಹಾಕುವ ಸಾಹಸಕ್ಕೆ ಮುಂದಾಗಿದ್ದರು. ಈ ವೇಳೆ ನಾಗರಾಜ್ ರಾಯ್ಕರ್ ಅವರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಆಡಿ ಕಾರು, ನಿಮಿಷ್ ಸಂಗಳದ ಅವರ ಸ್ಕೂಟಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ನಿಮಿಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪ್ರಾಪ್ತ ಮಗನ ಕೈಗೆ ಕಾರು ನೀಡಿದ ಕಾರಣಕ್ಕಾಗಿ ತಂದೆಯನ್ನು ಪೊಲೀಸರು ಕಾನೂನುಬದ್ಧವಾಗಿ ಹೊಣೆಗಾರರನ್ನಾಗಿ ಮಾಡಿದ್ದಾರೆ.
ಪ್ರಕರಣದ ತನಿಖೆಯ ವೇಳೆ ಕಾರಿನ ಬಗ್ಗೆ ಮತ್ತಷ್ಟು ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಉತ್ತರ ಪ್ರದೇಶದ ನೋಂದಣಿ ಹೊಂದಿರುವ ಈ ಐಷಾರಾಮಿ ಆಡಿ ಕಾರಿನ ವಿಮೆ 2022ರ ಡಿಸೆಂಬರ್ನಲ್ಲೇ ಮುಕ್ತಾಯಗೊಂಡಿದ್ದು, ಅಂದಿನಿಂದ ಅದನ್ನು ನವೀಕರಿಸಲಾಗಿಲ್ಲ. ಅಷ್ಟೇ ಅಲ್ಲದೆ, ಕಾರಿನ ಮಾಲೀಕತ್ವದ ದಾಖಲೆಗಳು (RC) ಕೂಡ ಇನ್ನೂ ಮೂಲ ಮಾಲೀಕರ ಹೆಸರಿನಲ್ಲೇ ಇರುವುದು ಪತ್ತೆಯಾಗಿದ್ದು, ನಾಗರಾಜ್ ರಾಯ್ಕರ್ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ. ಇನ್ಶೂರೆನ್ಸ್ ಇಲ್ಲದ ಮತ್ತು ಸರಿಯಾದ ದಾಖಲೆಗಳಿಲ್ಲದ ವಾಹನವನ್ನು ಅಪ್ರಾಪ್ತರಿಗೆ ನೀಡಿದ ಆರೋಪದಡಿ ಈಗ ತಂದೆ-ಮಗ ಇಬ್ಬರೂ ಜೈಲು ಪಾಲಾಗಿದ್ದಾರೆ.




