ಆರೋಪದ ಸುಳಿಯಲ್ಲಿ ನಟ ಮುರಳಿ ಕೃಷ್ಣ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮುಂದಾದ ಸಂತ್ರಸ್ತ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೂತಲಪಟ್ಟುವಿನಲ್ಲಿ ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ವಿರುದ್ಧ ಭಾರಿ ಮೊತ್ತದ ಹಣ ವಂಚನೆ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರೈಲ್ವೆ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿ ಲೋಕೇಶ್ ಮತ್ತು ಅವರ ಸಂಬಂಧಿಕರಿಂದ ಸುಮಾರು 3.15 ಕೋಟಿ ರೂಪಾಯಿಗಳನ್ನು ಪಡೆದು ನಟ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ನೀಡಿದ್ದ ಹಣವನ್ನು ವಾಪಸ್ ಕೇಳಿದಾಗ ನಟನಿಂದ ಕಿರುಕುಳ ಎದುರಾದ ಹಿನ್ನೆಲೆಯಲ್ಲಿ, ಲೋಕೇಶ್ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಪ್ರಸ್ತುತ ಅವರನ್ನು ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಲೋಕೇಶ್ ಬರೆದಿದ್ದಾರೆನ್ನಲಾದ ಡೆತ್ ನೋಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ತಮ್ಮ ಈ ಸ್ಥಿತಿಗೆ ನಟ ಮಾನ್ಯಂ ಮುರಳಿ ಕೃಷ್ಣ ಮತ್ತು ಅವರ ಸಹೋದರನೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ. ದೊಡ್ಡ ಮೊತ್ತದ ಸಾಲದಿಂದಾಗಿ ತಮ್ಮ ಕುಟುಂಬ ಬೀದಿಗೆ ಬಂದಿದೆ ಎಂದು ಅಳಲು ತೋಡಿಕೊಂಡಿರುವ ಅವರು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಂಚನೆ ಆರೋಪದಡಿ ನಟನಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ ಹಾಗೂ ಎಡಿಟರ್ ಆಗಿಯೂ ಗುರುತಿಸಿಕೊಂಡಿದ್ದ ಮುರಳಿ ಕೃಷ್ಣ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.




