ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಆಪ್ತ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾಟಿಂಗ್ ನಡೆಸಿದ್ದಾರೆ. ಈ ಹಿಂದೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದೀಗ ಅದೇ ಹಾದಿಯಲ್ಲಿ ಮಾತನಾಡಿರುವ ವಸತಿ ಸಚಿವ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರು 2028ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಖುರ್ಚಿಯಲ್ಲಿ ಭದ್ರವಾಗಿ ಕುಳಿತಿದ್ದಾರೆ ಮತ್ತು ಅವರ ಆಡಳಿತದ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿ, ರಾಜ್ಯದಲ್ಲಿ ಮುಂದಿನ 2028ರ ವಿಧಾನಸಭಾ ಚುನಾವಣೆಯು ಕೂಡ ಸಿದ್ದರಾಮಯ್ಯ ಅವರ ಸಾರಥ್ಯದಲ್ಲೇ ನಡೆಯಲಿದೆ ಎಂಬ ಮಹತ್ವದ ಹೇಳಿಕೆ ನೀಡುವ ಮೂಲಕ ಅಧಿಕಾರ ಹಂಚಿಕೆ ಅಥವಾ ಸಿಎಂ ಬದಲಾವಣೆ ಎಂಬ ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಜಮೀರ್ ಅವರ ಈ ಮಾತುಗಳು ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.

ಇನ್ನು ಮುಖ್ಯಮಂತ್ರಿ ಬದಲಾವಣೆಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ಹೈಕಮಾಂಡ್ ಸಂಸ್ಕೃತಿಯುಳ್ಳ ಪಕ್ಷವಾಗಿದ್ದು, ಅಂತಿಮ ತೀರ್ಮಾನಗಳನ್ನು ವರಿಷ್ಠರೇ ತೆಗೆದುಕೊಳ್ಳುತ್ತಾರೆ ,ಮುಖ್ಯಮಂತ್ರಿಯನ್ನು ಬದಲಾಯಿಸುವುದು ತನ್ನ ಅಥವಾ ನಾಗೇಂದ್ರ ಅವರಂತಹ ವ್ಯಕ್ತಿಗಳ ಕೈಯಲ್ಲಿಲ್ಲ, ಅದು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ. ದೆಹಲಿಯಲ್ಲಿ ಡಿಕೆಶಿ ಮತ್ತು ಹೈಕಮಾಂಡ್ ನಾಯಕರ ಭೇಟಿಯ ನಡುವೆಯೇ ಜಮೀರ್ ಅವರ ಈ ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ.


