Saturday, February 14, 2026
29.9 C
Bengaluru
Google search engine
LIVE
ಮನೆಜಿಲ್ಲೆಮೈಸೂರು ತ್ರಿನೇಶ್ವರನಿಗೆ ಒಡೆಯರ್ ನೀಡಿದ 11 ಕೆಜಿ ಚಿನ್ನದ ಮುಖವಾಡ ಧಾರಣೆ

ಮೈಸೂರು ತ್ರಿನೇಶ್ವರನಿಗೆ ಒಡೆಯರ್ ನೀಡಿದ 11 ಕೆಜಿ ಚಿನ್ನದ ಮುಖವಾಡ ಧಾರಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿದ್ದು, ಈ ಮಹಾಪರ್ವದ ಅಂಗವಾಗಿ ಅರಮನೆ ಆವರಣದಲ್ಲಿರುವ ಪುರಾತನ ತ್ರಿನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 11 ಕೆಜಿ ತೂಕದ ಅಪರೂಪದ ‘ಚಿನ್ನದ ಮುಖವಾಡ’ವನ್ನು ಹಸ್ತಾಂತರಿಸಲಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಸಿಗುವ ಈ ಕೋಟಿಗಟ್ಟಲೆ ಮೌಲ್ಯದ ಬಂಗಾರದ ಕವಚವನ್ನು ಇಂದು ಅರಮನೆಯ ಭದ್ರತಾ ಖಜಾನೆಯಿಂದ ಹೊರತೆಗೆದು, ಬಿಗಿ ಪೊಲೀಸ್ ಕಾವಲಿನಲ್ಲಿ ದೇವಸ್ಥಾನಕ್ಕೆ ತರಲಾಗಿದೆ. ಅತ್ಯಂತ ನೈಪುಣ್ಯತೆಯಿಂದ ಕೂಡಿದ ಈ ಮುಖವಾಡವನ್ನು ನಾಳೆ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಶಿವಲಿಂಗಕ್ಕೆ ಧಾರಣೆ ಮಾಡಲಿದ್ದು, ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತಾದಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಸುಂದರವಾದ ಚಿನ್ನದ ಮುಖವಾಡಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಇದನ್ನು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಪುತ್ರ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ಜನನದ ಸಂಭ್ರಮಕ್ಕೆ ಕಾಣಿಕೆಯಾಗಿ ನೀಡಿದ್ದರು. ಈ ಮುಖವಾಡವು ಕಲಾವಿದರ ಅದ್ಭುತ ಕೈಚಳಕಕ್ಕೆ ಸಾಕ್ಷಿಯಾಗಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಕೇವಲ ಶಿವರಾತ್ರಿಯ ದಿನ ಮಾತ್ರ ಈ ಮುಖವಾಡವನ್ನು ಶಿವಲಿಂಗಕ್ಕೆ ತೊಡಿಸುವುದರಿಂದ, ವರ್ಷವಿಡೀ ಕಾಯುವ ಭಕ್ತರಿಗೆ ನಾಳೆ ದಿನವಿಡೀ ಈ ದರ್ಶನ ಭಾಗ್ಯ ಸಿಗಲಿದೆ.

ಬಂಗಾರದ ಮುಖವಾಡದ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಸಶಸ್ತ್ರ ಪಡೆಯ ಭದ್ರತೆಯನ್ನು ಕಲ್ಪಿಸಲಾಗಿದೆ. ಮೈಸೂರಿನಲ್ಲಿ ಈಗಾಗಲೇ ಶಿವರಾತ್ರಿಯ ಮುನ್ನೋಡಿ ಆರಂಭವಾಗಿದ್ದು, ದೇಗುಲದ ಆವರಣ ಭಕ್ತರಿಂದ ತುಂಬಿಹೋಗಿದೆ. ನಾಳೆ ಮುಂಜಾನೆಯಿಂದಲೇ ತ್ರಿನೇಶ್ವರ ಸ್ವಾಮಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಇಡೀ ಸಾಂಸ್ಕೃತಿಕ ನಗರಿಯಲ್ಲಿ ಈಗ ಶಿವನಾಮ ಸ್ಮರಣೆ ಮೊಳಗುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments