ರಾಯಚೂರು: ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪತ್ನಿ ಪತಿಯನ್ನೇ ನದಿಗೆ ತಳ್ಳಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಕಾಡ್ಲೂರು ಸಮೀಪದ ಕೃಷ್ಣ ನದಿ ಬ್ರಿಡ್ಜ್ ಮೇಲೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಪತಿಯನ್ನು ಪತ್ನಿ ನೀರಿಗೆ ತಳ್ಳಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು, ಹಗ್ಗದ ಸಹಾಯದಿಂದ ಪತಿಯನ್ನು ರಕ್ಷಣೆ ಮಾಡಿದ್ದಾರೆ.
ರಾಯಚೂರಿನ ಶಕ್ತಿನಗರ ಮೂಲದ ತಾತಪ್ಪನನ್ನು ಪತ್ನಿ ಗೆದ್ದಮ್ಮ ನೀರಿಗೆ ತಳ್ಳಿದ್ದಾರೆ. ನೀರಿಗೆ ಬಿದ್ದ ಕೂಡಲೇ ಪತಿಗೆ ಈಜಲು ಬರುತ್ತಿದ್ದು ಈಜಿಕೊಂಡು ನದಿ ಮಧ್ಯದ ಬಂಡೆ ಮೇಲೆ ಹೋಗಿ ಕುಳಿತುಕೊಂಡಿದ್ದಾನೆ. ಬಳಿಕ ಯಾರದ್ರೂ ಕಾಪಾಡಿ ನನ್ನನ್ನು ಎಂದು ಕೂಗಿಕೊಂಡಿದ್ದಾನೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು ರಕ್ಷಣೆ ಮಾಡಿದ್ದಾರೆ.
ನದಿಯಿಂದ ಹೊರಗಡೆ ಬಂದ ಬಳಿಕ ಪತ್ನಿಯೇ ನನ್ನನ್ನು ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಆದ್ರೆ ಆಕೆ ತನಗೇನು ಗೊತ್ತಿಲ್ಲ.. ನಾನು ತಳ್ಳಿಲ್ಲ ಅಂತ ಹೇಳಿದ್ದಾಳೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ.


