ಜಿಲ್ಲೆಸುದ್ದಿ

ಪೊಲೀಸಪ್ಪನ ‘ಸೈಬರ್ ಕಾಟ’ಕ್ಕೆ ಬಲಿಯಾದ ವಿಧವೆ..!

ಶಿವಮೊಗ್ಗ: ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪೊಲೀಸ್ ಪೇದೆಯೊಬ್ಬನ ಕಿರುಕುಳಕ್ಕೆ ಬೇಸತ್ತು ವಿಧವೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೇವಲ ಒಂದು ವಾರದ ಹಿಂದಷ್ಟೇ ಪತಿಯನ್ನು ಕಳೆದುಕೊಂಡಿದ್ದ ಸ್ವಾತಿ ಎಂಬುವವರು, ಈಗ ವಾಟ್ಸ್‌ಆ್ಯಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಜೀವನವನ್ನು ಅಂತ್ಯಗೊಳಿಸಿದ್ದಾರೆ. ಈ ದುರಂತದಿಂದಾಗಿ ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವುದು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ಎಂಬ ಪೇದೆಯೇ ಈ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ನೇರವಾಗಿ ಉಲ್ಲೇಖಿಸಲಾಗಿದೆ. ಪತಿ ಜಗದೀಶ್ ಅವರ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಸ್ವಾತಿಯನ್ನು ಗುರಿಯಾಗಿಸಿಕೊಂಡಿದ್ದ ಮೋಹನ್, ಫೇಸ್‌ಬುಕ್ ಮೂಲಕ ಸಂದೇಶಗಳನ್ನು ಕಳುಹಿಸಿ ಪೀಡಿಸುತ್ತಿದ್ದನು. ಆತನ ಅಕೌಂಟ್ ಅನ್ನು ಸ್ವಾತಿ ಬ್ಲಾಕ್ ಮಾಡಿದಕ್ಕೆ ಕೋಪಗೊಂಡ ಪೇದೆ, ಬೇರೆ ಅಕೌಂಟ್ ಬಳಸಿ ಸ್ವಾತಿ ಬಗ್ಗೆ ಸಾರ್ವಜನಿಕವಾಗಿ ಅತ್ಯಂತ ಕೆಟ್ಟದಾಗಿ ಅಪಪ್ರಚಾರ ನಡೆಸಿದ್ದನು. ಈ ಸುಳ್ಳು ಆರೋಪಗಳು ಮತ್ತು ಮಾನಸಿಕ ಕಿರುಕುಳವನ್ನು ತಾಳಲಾರದೆ ಸ್ವಾತಿ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

“ಅಮ್ಮ ನನ್ನನ್ನು ಕ್ಷಮಿಸು, ನನ್ನ ಬಗ್ಗೆ ಇಲ್ಲದ ಸಲ್ಲದ ಕೆಟ್ಟ ವಿಷಯಗಳನ್ನು ಹರಡಿರುವ ಮೋಹನ್ ಎಂಬ ಪೊಲೀಸ್‌ನನ್ನು ಮಾತ್ರ ಸುಮ್ಮನೆ ಬಿಡಬೇಡಿ” ಎಂದು ಸ್ವಾತಿ ತನ್ನ ಕೊನೆಯ ಸಂದೇಶದಲ್ಲಿ ಅಲವತ್ತುಕೊಂಡಿದ್ದಾರೆ. ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಸಾವಿನ ಅಂಚಿಗೆ ತಳ್ಳಿದ ಪೇದೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button