TUMKURಸುದ್ದಿ

ನಡೆದಾಡುವ ದೇವರ ಜನ್ಮದಿನೋತ್ಸವ: ದೇಶದ ವಿಕಾಸದಲ್ಲಿ ಶ್ರೀಮಠದ ಪಾತ್ರ ದೊಡ್ಡದು ಎಂದ ರಾಷ್ಟ್ರಪತಿ.

ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ವಿಕಾಸದಲ್ಲಿ ಸಿದ್ಧಗಂಗಾ ಮಠದ ಪಾತ್ರ ಬಹಳ ದೊಡ್ಡದಿದೆ ಎಂದು ತಿಳಿಸಿದ ಅವರು, ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ ಮತ್ತು ಆಶ್ರಯ ನೀಡುವ ಮೂಲಕ ಮಠವು ‘ದಯವೇ ಧರ್ಮದ ಮೂಲವಯ್ಯ’ ಎಂಬ ತತ್ವದಡಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿಯವರು ಮಾತನಾಡಿ, ಶಿವಕುಮಾರ ಸ್ವಾಮೀಜಿಯವರು ಒಂದೇ ಸ್ಥಳದಲ್ಲಿ ನಿರಂತರವಾಗಿ ಜನಸೇವೆಯಲ್ಲಿ ಜೀವನ ಸಮರ್ಪಣೆ ಮಾಡಿದ್ದು ಒಂದು ಪವಾಡವಿದ್ದಂತೆ ಎಂದು ಬಣ್ಣಿಸಿದರು. ಬಡವರಿಗೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದೇ ಅವರ ಬದುಕಿನ ಮುಖ್ಯ ಗುರಿಯಾಗಿತ್ತು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಮೀಜಿಯವರ ಸೇವೆ ಮಾನವಕುಲದ ಕಲ್ಯಾಣಕ್ಕೆ ಅನನ್ಯವಾಗಿದೆ ಎಂದು ತಿಳಿಸಿದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸ್ವಾಮೀಜಿಯವರು ಅನಾಥ ಮಕ್ಕಳ ಪಾಲಿನ ತಂದೆಯಾಗಿದ್ದರು ಮತ್ತು ಮನುಷ್ಯನಿಂದ ಮಹದೇವರಾಗಿ ಬೆಳೆದವರು ಎಂದು ಗುಣಗಾನ ಮಾಡಿದರು. ಗೃಹ ಸಚಿವ ಡಾ. ಪರಮೇಶ್ವರ್ ಮಾತನಾಡಿ, ಸಿದ್ಧಗಂಗಾ ಮಠವು ಕೇವಲ ಧಾರ್ಮಿಕ ಕ್ಷೇತ್ರವಲ್ಲದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿದೆ ಎಂದು ಪ್ರಶಂಸಿಸಿದರು. ಈ ವಿಶೇಷ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿಯವರು ರಾಷ್ಟ್ರಪತಿಗಳಿಗೆ ಮಠದ ಪರವಾಗಿ ಬಸವಣ್ಣನವರ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಕೇಂದ್ರ ಸಚಿವರು ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Comments (0)

Your email address will not be published. Required fields are marked *

Back to top button