Thursday, February 12, 2026
23.9 C
Bengaluru
Google search engine
LIVE
ಮನೆ#Exclusive Newsರಾಹುಲ್-ಬಿಟ್ಟು ಫೈಟ್;ಸಂಸತ್ ಹೊರಗೆ 'ದೇಶದ್ರೋಹಿ' ವರ್ಸಸ್ 'ದೇಶದ ಶತ್ರು' ವಾರ್

ರಾಹುಲ್-ಬಿಟ್ಟು ಫೈಟ್;ಸಂಸತ್ ಹೊರಗೆ ‘ದೇಶದ್ರೋಹಿ’ ವರ್ಸಸ್ ‘ದೇಶದ ಶತ್ರು’ ವಾರ್

ಸಂಸತ್ತಿನ ಕಲಾಪ ಆರಂಭಕ್ಕೂ ಮುನ್ನ ಮಕರ ದ್ವಾರದ ಬಳಿ ನಡೆದ ಘಟನೆಯು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ಕಂಡ ರಾಹುಲ್ ಗಾಂಧಿ, “ನೋಡಿ, ನಮ್ಮ ದೇಶದ್ರೋಹಿ ಗೆಳೆಯ ಬರುತ್ತಿದ್ದಾರೆ” ಎಂದು ತಮಾಷೆ ಮಾಡಿದ್ದು ಕಿಡಿಹೊತ್ತಿಸಿದೆ. ಅಷ್ಟೇ ಅಲ್ಲದೆ, ರಾಹುಲ್ ಗಾಂಧಿ ಎದ್ದು ನಿಂತು ಹಸ್ತಲಾಘವಕ್ಕೆ ಕೈಚಾಚಿ “ಡೋಂಟ್ ವರಿ ಬ್ರದರ್, ನೀವು ಮತ್ತೆ ಕಾಂಗ್ರೆಸ್‌ಗೆ ಮರಳುತ್ತೀರಿ” ಎಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ತಮ್ಮನ್ನು ‘ದೇಶದ್ರೋಹಿ’ ಎಂದು ಕರೆದಿದ್ದಕ್ಕೆ ತೀವ್ರವಾಗಿ ಕೆರಳಿದ ರವನೀತ್ ಸಿಂಗ್ ಬಿಟ್ಟು, ರಾಹುಲ್ ಗಾಂಧಿಯ ಹಸ್ತಲಾಘವವನ್ನು ನಿರಾಕರಿಸಿದ್ದಲ್ಲದೆ, “ನೀವು ಈ ದೇಶದ ಶತ್ರು” (ದೇಶ್ ಕೆ ದುಷ್ಮನ್) ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದರು. “ನೀವೇನೋ ಯುದ್ಧ ಗೆದ್ದವರಂತೆ ಇಲ್ಲಿ ಕುಳಿತಿದ್ದೀರಿ” ಎಂದು ಪ್ರತಿಭಟನಾ ನಿರತ ಸಂಸದರನ್ನು ಲೇವಡಿ ಮಾಡಿದರು. ಮೂರು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಬಿಟ್ಟು, 2024ರ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಇಬ್ಬರ ನಡುವಿನ ವೈಯಕ್ತಿಕ ಮತ್ತು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಯಿತು.

ಈ ಘಟನೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. “ಪಕ್ಷಕ್ಕೆ ದ್ರೋಹ ಮಾಡಿದವರಿಗೆ ದೇಶದ್ರೋಹಿ ಎನ್ನದೆ ಇನ್ನೇನು ಹೇಳಲು ಸಾಧ್ಯ?” ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ರಾಹುಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, “ಸಿಖ್ಖರು ಎಂದಿಗೂ ದೇಶದ್ರೋಹಿಗಳಾಗಲು ಸಾಧ್ಯವಿಲ್ಲ, ಗಾಂಧಿ ಕುಟುಂಬದ ಮನಸ್ಥಿತಿ ಇನ್ನೂ ಬದಲಾಗಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಒಟ್ಟಾರೆಯಾಗಿ, ಸಂಸತ್ತಿನ ಹೊರಗಿನ ಈ ಕಿತ್ತಾಟ ಸದನದ ಒಳಗೂ ಬಿಸಿ ಏರಿಸುವ ಮುನ್ಸೂಚನೆ ನೀಡಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments