KOPPALA

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಬಿರುಕು; ಬಲೆಗೆ ಬಿದ್ದ 20 ಕೆಜಿ ತೂಕದ ಬೃಹತ್ ಮೀನು!

ಕೊಪ್ಪಳ: ನಾಲ್ಕೈದು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿಗೆ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆಯು ಭಾರಿ ಪ್ರಮಾಣದಲ್ಲಿ ಒಡೆದಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಜಲಾಶಯದ ಅಧಿಕಾರಿಗಳು ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಲುವೆಗೆ ನೀರು ಬಿಟ್ಟಿದ್ದರು. ಆದರೆ, ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಕಾಲುವೆಯ ಏರಿ ಒಡೆದ ಪರಿಣಾಮ, ನದಿಗಿಂತ ವೇಗವಾಗಿ ನೀರು ಹರಿದು ಪಕ್ಕದ ಜಮೀನು ಹಾಗೂ ರೆಸಾರ್ಟ್‌ಗಳಿಗೆ ನುಗ್ಗಿದೆ. ಇದರಿಂದ ರೈತರ ಬೆಳೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ.

ಕಾಲುವೆ ಒಡೆದ ರಭಸಕ್ಕೆ ನೀರು ಜಮೀನುಗಳತ್ತ ನುಗ್ಗಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸ್ಥಳೀಯರ ಬಲೆಗೆ ಬೃಹತ್ ಗಾತ್ರದ ಮೀನುಗಳು ಬಿದ್ದಿವೆ. ಸುಮಾರು 15 ರಿಂದ 20 ಕೆಜಿ ತೂಕದ ಬೃಹತ್ ಮೀನು ಸಿಕ್ಕಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಕಾಲುವೆ ಒಡೆದಿದ್ದರಿಂದ ಒಂದೆಡೆ ಆತಂಕ ಮನೆಮಾಡಿದ್ದರೆ, ಮತ್ತೊಂದೆಡೆ ಬೃಹತ್ ಮೀನು ಸಿಕ್ಕಿದ್ದಕ್ಕೆ ಕೆಲವು ಸ್ಥಳೀಯರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ನೀರು ಪೋಲಾಗುವುದನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.

Comments (0)

Your email address will not be published. Required fields are marked *

Back to top button