KOLARಜಿಲ್ಲೆ

ಟೊಮೇಟೊಗೆ ತಟ್ಟಿದ ಯುದ್ಧದ ಬಿಸಿ; ಕೆಜಿಗೆ ಸಿಗುತ್ತಿಲ್ಲ 10 ರೂಪಾಯಿ!

ಕೋಲಾರ: ಕೊಲ್ಲಿ ದೇಶಗಳ ನಡುವಿನ ಭೀಕರ ಸಮರ ಇದೀಗ ಕೋಲಾರದ ರೈತರ ಬದುಕಿಗೂ ಬಿಸಿ ಮುಟ್ಟಿಸಿದೆ. ಯುದ್ಧದ ಕಾರಣದಿಂದ ರಫ್ತು ವಹಿವಾಟು ಸ್ಥಗಿತಗೊಂಡಿರುವುದು ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರು ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿಯನ್ನು ನಲುಗುವಂತೆ ಮಾಡಿದೆ. ಸದಾ ಸಾವಿರಾರು ಲಾರಿಗಳು, ಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆ ಈಗ ವ್ಯಾಪಾರಿಗಳಿಲ್ಲದೆ ಭಣಗುಡುತ್ತಿದೆ.

ಇತ್ತ ಮಾರುಕಟ್ಟೆಯಲ್ಲಿ ಟೊಮಾಟೊಗೆ ಸರಿಯಾದ ಬೆಲೆಯೂ ಇಲ್ಲದೆ ರೈತರು ಕೃಷಿಯಿಂದಲೇ ಹಿಂದೆ ಸರಿಯುವಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮಾಟೊ ಕೇವಲ 10 ರೂಪಾಯಿಗೆ ಮಾರಾಟವಾಗುತ್ತಿದ್ದು, ಬೆಳೆ ಬೆಳೆಯಲು ಮಾಡಿದ ಖರ್ಚೂ ಕೈಗೆ ಬರುತ್ತಿಲ್ಲ. ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಮತ್ತು ಹೋಟೆಲ್ ಉದ್ಯಮ ಅನುಭವಿಸುತ್ತಿರುವ ಸಂಕಷ್ಟದಿಂದಾಗಿ ಸ್ಥಳೀಯವಾಗಿ ಬೇಡಿಕೆಯೂ ಕುಸಿದಿದೆ. ಬೆಳೆದ ಬೆಳೆಯನ್ನು ರಫ್ತು ಮಾಡಲು ಸಾಧ್ಯವಾಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಕೃಷಿ ಪರಿಕರಗಳ ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಈ ದುಸ್ಥಿತಿಯಿಂದಾಗಿ ಮುಂದಿನ ದಿನಗಳಲ್ಲಿ ಟೊಮಾಟೊ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇದು ಭವಿಷ್ಯದಲ್ಲಿ ಟೊಮಾಟೊ ತೀವ್ರ ಕೊರತೆ ಮತ್ತು ಬೆಲೆ ಏರಿಕೆಗೆ ಕಾರಣವಾಗುವ ಆತಂಕ ಮೂಡಿಸಿದೆ. ಒಟ್ಟಾರೆಯಾಗಿ ಸಾಲ ಮಾಡಿ ಬೆಳೆ ಬೆಳೆದಿದ್ದ ಕೋಲಾರದ ಟೊಮಾಟೊ ಬೆಳೆಗಾರರು ಈಗ ಕೊಲ್ಲಿ ಯುದ್ಧದ ಹೊಡೆತಕ್ಕೆ ಸಿಲುಕಿ ಕಣ್ಣೀರು ಹಾಕುವಂತಾಗಿದೆ.

Comments (0)

Your email address will not be published. Required fields are marked *

Back to top button