ರಾಜ್ಯಸುದ್ದಿ

ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಬಾಗಿಲು ಏಕಾಏಕಿ ಓಪನ್!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ರೇಷ್ಮೆ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ನಿರ್ಲಕ್ಷ್ಯದಿಂದ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಬಸ್ಸಿನಿಂದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟಿರುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುತ್ತೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ಸು ಕಳಿಯ ಗ್ರಾಮದ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಬಸ್ಸಿನ ಹಿಂಬದಿಯ ಬಾಗಿಲು ಏಕಾಏಕಿ ತೆರೆದುಕೊಂಡಿದೆ. ಈ ವೇಳೆ ಬಾಗಿಲ ಬಳಿಯೇ ನಿಂತಿದ್ದ ಅಕ್ಕ-ತಂಗಿ ಇಬ್ಬರೂ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಬಸ್ಸಿನಿಂದ ನೇರವಾಗಿ ಡಾಂಬರು ರಸ್ತೆಗೆ ಬಿದ್ದಿದ್ದಾರೆ. ಮೊದಲು ಅಕ್ಕ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಾಗ, ಆಕೆಯನ್ನು ಹಿಡಿಯಲು ಹೋದ ತಂಗಿಯೂ ಸಹ ರಸ್ತೆಗೆ ಉರುಳಿಬಿದ್ದಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಈ ದೃಶ್ಯ ನೋಡುಗರ ಎದೆಝಲ್ಲೆನಿಸುವಂತಿದೆ.

ಅದೃಷ್ಟವಶಾತ್ ಈ ಭೀಕರ ಘಟನೆಯಲ್ಲಿ ಇಬ್ಬರೂ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೇರುಕಟ್ಟೆಯಲ್ಲಿ ಬಸ್ ಹತ್ತಿದ್ದ ಈ ಸಹೋದರಿಯರು ತಮ್ಮ ಮನೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳ ಸರಿಯಾದ ನಿರ್ವಹಣೆ ಇಲ್ಲದಿರುವುದು ಮತ್ತು ಚಾಲಕನ ಅತಿ ವೇಗದ ಚಾಲನೆಯೇ ಈ ಘಟನೆಗೆ ಮುಖ್ಯ ಕಾರಣ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಈ ಘಟನೆಯು ದೊಡ್ಡ ಪ್ರಶ್ನೆಯನ್ನು ಎತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಂತಹ ನಿರ್ಲಕ್ಷ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button