ಕ್ಯಾಮರಾದಲ್ಲೇ ಸೆರೆಯಾಯ್ತು ವಿದ್ಯಾರ್ಥಿಯ ಕೊನೆಕ್ಷಣ; ರೀಲ್ಸ್ ಮಾಡುವಾಗ ಭೀಕರ ಅಪಘಾತ!

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಬೇಕೆಂಬ ಹಂಬಲ ಯುವ ಪೀಳಿಗೆಯನ್ನು ಸಾವಿನ ಬಲೆಗೆ ತಳ್ಳುತ್ತಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ರೀಲ್ಸ್ ಸ್ಟಂಟ್ ವೇಳೆ 15 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಹರ್ಯಾಣದ ನುಹ್ನಲ್ಲಿ ಅಂತಹದ್ದೇ ಮತ್ತೊಂದು ದಾರುಣ ಘಟನೆ ನಡೆದಿದೆ. ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಿಸುತ್ತಿದ್ದ 18 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್ ಮೊಯಿನ್ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೊಹಮ್ಮದ್ ಮೊಯಿನ್ ತನ್ನ ಸ್ನೇಹಿತ ಎಂಡಿ ಶಾದ್ ಮತ್ತು ಒಬ್ಬ ಕ್ಯಾಮರಾಮ್ಯಾನ್ ಜೊತೆಗೂಡಿ ಎಕ್ಸ್ಪ್ರೆಸ್ವೇ ರಸ್ತೆ ಬದಿಯಲ್ಲಿ ರೀಲ್ಸ್ ಮಾಡುತ್ತಿದ್ದ. ಕೈಯಲ್ಲಿ ಎನರ್ಜಿ ಡ್ರಿಂಕ್ ಬಾಟಲಿ ಹಿಡಿದು ಸ್ಟೈಲಿಶ್ ಆಗಿ ನಡೆದು ಬರುತ್ತಿದ್ದ ದೃಶ್ಯವನ್ನು ಕ್ಯಾಮರಾಮ್ಯಾನ್ ಸೆರೆಹಿಡಿಯುತ್ತಿದ್ದನು. ಇವರು ಶೂಟಿಂಗ್ನಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ಹಿಂದಿನಿಂದ ಅತಿ ವೇಗವಾಗಿ ಬರುತ್ತಿದ್ದ ಟ್ರಕ್ ಇವರನ್ನು ಗಮನಿಸಿರಲಿಲ್ಲ. ರಸ್ತೆ ಬದಿಯಲ್ಲೇ ಇದ್ದ ಯುವಕರಿಗೆ ಟ್ರಕ್ ಬಲವಾಗಿ ಡಿಕ್ಕಿ ಹೊಡೆದಿದ್ದು, ಮೊಯಿನ್ ಹಲವಾರು ಅಡಿಗಳಷ್ಟು ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಈ ಇಡೀ ಭೀಕರ ದೃಶ್ಯವು ಅವರದೇ ಫೋನ್ನ ಕ್ಯಾಮರಾದಲ್ಲಿ ಸೆರೆಯಾಗಿದೆ.
ದುರಂತದಲ್ಲಿ ಮೊಯಿನ್ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟರೆ, ಆತನ ಸ್ನೇಹಿತ ಶಾದ್ ಮತ್ತು ಕ್ಯಾಮರಾಮ್ಯಾನ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪೊಲೀಸರ ಪ್ರಕಾರ, ಎಕ್ಸ್ಪ್ರೆಸ್ವೇ ಅಂತಹ ನಿರ್ಬಂಧಿತ ಪ್ರದೇಶಗಳಲ್ಲಿ ಪಾದಚಾರಿಗಳಿಗೆ ಅವಕಾಶವಿಲ್ಲದಿದ್ದರೂ, ಯುವಕರು ರೀಲ್ಸ್ಗಾಗಿ ಅಲ್ಲಿಗೆ ಹೋಗಿದ್ದರು. ವೈರಲ್ ಆಗಿರುವ ವಿಡಿಯೋ ನೋಡಿದ ನೆಟ್ಟಿಗರು, ಟ್ರಕ್ ಚಾಲಕ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲೈಕ್ಸ್ ಮತ್ತು ಫಾಲೋವರ್ಸ್ ಪಡೆಯುವ ಧಾವಂತದಲ್ಲಿ ಅಪಾಯಕಾರಿ ರಸ್ತೆಗಳು, ಎತ್ತರದ ಕಟ್ಟಡಗಳು ಅಥವಾ ಚಲಿಸುವ ವಾಹನಗಳ ಮುಂದೆ ಸಾಹಸ ಮಾಡುವುದು ಪ್ರಾಣಕ್ಕೆ ಸಂಚಕಾರ ತರುತ್ತಿದೆ.




