ಹಾರ್ಮುಜ್ ಜಲಸಂಧಿ ಸಂಘರ್ಷ; ಇರಾನ್ಗೆ 48 ಗಂಟೆಗಳ ಗಡುವು ನೀಡಿದ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶಕ್ಕೆ ತೀವ್ರ ಎಚ್ಚರಿಕೆಯನ್ನು ನೀಡಿದ್ದು, ಮುಂದಿನ 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಗಡುವು ವಿಧಿಸಿದ್ದಾರೆ. ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವು ಇದೇ ಮಾರ್ಗದ ಮೂಲಕ ಸಾಗಣೆಯಾಗುತ್ತಿದ್ದು, ಹಡಗು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇರಾನ್ನ ಕ್ರಮವನ್ನು ಟ್ರಂಪ್ ಖಂಡಿಸಿದ್ದಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಇರಾನ್ ಈ ಜಲಸಂಧಿಯನ್ನು ತೆರೆಯದಿದ್ದರೆ, ಆ ದೇಶದ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ನೇರ ಬೆದರಿಕೆ ಹಾಕಿದ್ದಾರೆ.
ಟ್ರಂಪ್ ಅವರ ಈ ಎಚ್ಚರಿಕೆಗೆ ಇರಾನ್ ಸೇನೆಯು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಂಘರ್ಷಕ್ಕೆ ತಾವು ಸಿದ್ಧರಿದ್ದೇವೆ ಎಂಬ ಸಂದೇಶ ರವಾನಿಸಿದೆ. ಇರಾನ್ನ ಇಂಧನ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ನಡೆದರೆ, ಈ ಪ್ರದೇಶದಲ್ಲಿರುವ ಅಮೆರಿಕಕ್ಕೆ ಸೇರಿದ ಎಲ್ಲಾ ಇಂಧನ ಘಟಕಗಳು, ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳು ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ತಿರುಗೇಟು ನೀಡುವುದಾಗಿ ಇರಾನ್ ಮಿಲಿಟರಿ ಎಚ್ಚರಿಸಿದೆ. ಇರಾನಿನ ಮಿಲಿಟರಿಯ ಕಾರ್ಯಾಚರಣೆಯ ಕಮಾಂಡ್ ಖತಮ್ ಅಲ್-ಅನ್ಬಿಯಾ ಅವರು ಈ ಕುರಿತು ಅಮೆರಿಕದ ಆಡಳಿತಕ್ಕೆ ಕೌಂಟರ್ ನೀಡಿದ್ದಾರೆ.
ಜಾಗತಿಕ ತೈಲ ಸಾಗಣೆಗೆ ಹಾರ್ಮುಜ್ ಜಲಸಂಧಿಯು ಅತ್ಯಂತ ಪ್ರಮುಖವಾದ ಜಲಮಾರ್ಗವಾಗಿದ್ದು, ಇದರ ಮೇಲೆ ಉಂಟಾಗಿರುವ ತಡೆ ವಿಶ್ವದ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಜಗತ್ತಿನ ಒಟ್ಟು ತೈಲ ಸರಬರಾಜಿನ ಸುಮಾರು ಶೇಕಡಾ 20 ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗಬೇಕಿರುವುದರಿಂದ, ಪ್ರಸ್ತುತ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಉಭಯ ದೇಶಗಳ ನಡುವಿನ ಈ ಮಾತಿನ ಚಕಮಕಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.




