ಶಾಮನೂರು ಫ್ಯಾಮಿಲಿಗೆ ಬಿ-ಫಾರಂ ಸಂಕಷ್ಟ;ಹೆಚ್.ಎಸ್. ಶಿವಶಂಕರ್ ವ್ಯಂಗ್ಯ!

ದಾವಣಗೆರೆ: ರಾಜಕಾರಣದಲ್ಲಿ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಶಾಮನೂರು ಕುಟುಂಬದ ಹಿಡಿತ ಈಗ ಸಡಿಲವಾಗುತ್ತಿದೆ ಎಂದು ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಮುಂದಿಟ್ಟುಕೊಂಡು ಮಾತನಾಡಿರುವ ಅವರು, “ಒಂದು ಕಾಲದಲ್ಲಿ ಬಿ-ಫಾರಂ ನಮ್ಮ ಮನೆಗೇ ಹುಡುಕಿಕೊಂಡು ಬರುತ್ತಿತ್ತು ಎನ್ನುತ್ತಿದ್ದವರಿಗೆ ಈಗ ಅದೇ ಬಿ-ಫಾರಂಗಾಗಿ ಅಲೆಯುವ ಕಾಲ ಬಂದಿದೆ” ಎಂದು ಪರೋಕ್ಷವಾಗಿ ತಿವಿದಿದ್ದಾರೆ. ರಾಜಕೀಯ ಅಧಿಕಾರ ಯಾರಿಗೂ ಶಾಶ್ವತವಲ್ಲ, ಸೂರ್ಯ ಮೇಲೆ ಏರಿದ ಮೇಲೆ ಕೆಳಗೆ ಇಳಿಯಲೇಬೇಕು ಎಂಬ ನಿಸರ್ಗದ ನಿಯಮ ಶಾಮನೂರು ಕುಟುಂಬಕ್ಕೂ ಅನ್ವಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಬಾರಿಯ ಉಪಚುನಾವಣೆಯನ್ನು ‘ಶ್ರೀಸಾಮಾನ್ಯ ವರ್ಸಸ್ ಶ್ರೀಮಂತಿಕೆ’ ನಡುವಿನ ಹೋರಾಟ ಎಂದು ಬಣ್ಣಿಸಿರುವ ಶಿವಶಂಕರ್, ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ಘೋಷಿಸಿದೆ . ಕೇವಲ ಹಣದ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಈ ಬಾರಿ ಸಾಬೀತಾಗಲಿದ್ದು, ಜನಬಲವೇ ಅಂತಿಮವಾಗಲಿದೆ . ಮೈತ್ರಿ ಅಭ್ಯರ್ಥಿಯ ಪರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಅಖಾಡಕ್ಕಿಳಿದು ಪ್ರಚಾರ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಕಾಂಗ್ರೆಸ್‌ನಲ್ಲಿನ ಟಿಕೆಟ್ ಫೈಟ್ ಮತ್ತು ಮುಸ್ಲಿಂ ರಾಜಕಾರಣದ ಬಗ್ಗೆಯೂ ಶಿವಶಂಕರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. “ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಇಲ್ಲದ ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಒಂದು ರೀತಿಯ ರಾಜಕೀಯ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಒಂದು ವೇಳೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಚುನಾವಣಾ ಪೈಪೋಟಿ ಮತ್ತಷ್ಟು ರಂಗೇರಲಿದೆ” ಎಂದಿದ್ದಾರೆ. ಕೋಟೆ ಕಟ್ಟಿದವರು ಇತಿಹಾಸದಲ್ಲಿ ಮಣ್ಣಾಗಿ ಹೋಗಿದ್ದಾರೆ, ಕಾಲ ಬದಲಾದಂತೆ ರಾಜಕೀಯ ಬದಲಾವಣೆಯೂ ಅನಿವಾರ್ಯ ಎಂದು ಹೇಳುವ ಮೂಲಕ ಶಾಮನೂರು ಕುಟುಂಬದ ಪ್ರಾಬಲ್ಯಕ್ಕೆ ಇತಿಶ್ರೀ ಹಾಡುವ ಕಾಲ ಹತ್ತಿರ ಬಂದಿದೆ ಎಂಬರ್ಥದಲ್ಲಿ ಶಿವಶಂಕರ್ ಗುಡುಗಿದ್ದಾರೆ.




