gadagರಾಜ್ಯಸುದ್ದಿ

ಕಲ್ಲಂಗಡಿ ಖರೀದಿಗೆ ಯಾರೂ ಬರ್ತಿಲ್ಲ..

ಗದಗ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕಲ್ಲಂಗಡಿ ಬೆಳೆಗಾರರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ರೈತರ ಬದುಕಿನ ಮೇಲೆ ಕರಾಳ ಛಾಯೆ ಬೀರಿದೆ. ಮಾಗಡಿ ಗ್ರಾಮದ ಕಲ್ಲಂಗಡಿ ಹಣ್ಣುಗಳು ಅತ್ಯಂತ ರುಚಿಕರ ಮತ್ತು ಗುಣಮಟ್ಟಕ್ಕೆ ಹೆಸರಾಗಿದ್ದರೂ, ಪ್ರಸ್ತುತ ಜಾಗತಿಕ ಪರಿಸ್ಥಿತಿಯಿಂದಾಗಿ ಹೊರ ದೇಶಗಳಿಗೆ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿಂದೆ ವಿದೇಶಗಳಿಗೆ ರವಾನೆಯಾಗುತ್ತಿದ್ದ ಇಲ್ಲಿನ ಕಲ್ಲಂಗಡಿಗೆ ಈಗ ಸ್ಥಳೀಯವಾಗಿಯೂ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬಂದರೂ, ಅದನ್ನು ಖರೀದಿಸಲು ವರ್ತಕರು ಮುಂದೆ ಬಾರದ ಕಾರಣ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಈ ಗ್ರಾಮದ ರೈತರೊಬ್ಬರು ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ 60 ಟನ್ ಕಲ್ಲಂಗಡಿ ಹಣ್ಣನ್ನು ಕಟಾವು ಮಾಡಿದ್ದು, ಮಾರಾಟವಾಗದ ಕಾರಣ ಅನಿವಾರ್ಯವಾಗಿ ಜಮೀನಿನಲ್ಲೇ ಶೇಖರಿಸಿ ಇಟ್ಟಿದ್ದಾರೆ. ಹೊರ ದೇಶಗಳ ಬೇಡಿಕೆ ಕುಸಿದಿರುವುದು ಮತ್ತು ಸಾರಿಗೆ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಜಮೀನಿನಲ್ಲಿ ರಾಶಿ ಹಾಕಲಾದ ಕಲ್ಲಂಗಡಿ ಹಣ್ಣುಗಳು ಬಿಸಿಲಿಗೆ ಒಣಗಿ, ಇಟ್ಟಲ್ಲೇ ಕೊಳೆತು ಹೋಗುತ್ತಿವೆ. ಕಷ್ಟಪಟ್ಟು ಬೆಳೆದ ಫಸಲು ಕಣ್ಣಮುಂದೆಯೇ ನಾಶವಾಗುತ್ತಿರುವುದನ್ನು ಕಂಡು ಅನ್ನದಾತ ಹತಾಶನಾಗಿದ್ದಾನೆ. ಸರ್ಕಾರ ಅಥವಾ ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಕಲ್ಲಂಗಡಿ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಅಥವಾ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಒಟ್ಟಾರೆಯಾಗಿ ರೈತರ ಪಾಲಿಗೆ ಈ ಬಾರಿಯ ಕಲ್ಲಂಗಡಿ ಸವಿಯ ಬದಲು ಕಹಿಯಾಗಿ ಪರಿಣಮಿಸಿದೆ.

Comments (0)

Your email address will not be published. Required fields are marked *

Back to top button