ಖಾಕಿ ಕೋಟೆಯಲ್ಲಿ ಕೈದಿಗಳಿಗೆ ಮೊಬೈಲ್ ಸೌಭಾಗ್ಯ?

ಧಾರವಾಡ: ಧಾರವಾಡ ಸೆಂಟ್ರಲ್ ಜೈಲಿನಲ್ಲಿ ಭದ್ರತಾ ಲೋಪದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೋಕ್ಸೋ ಕಾಯ್ದೆಯಡಿ ಜೈಲು ಸೇರಿರುವ ಕೈದಿಯೊಬ್ಬ ಜೈಲಿನೊಳಗಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕಾಲ್ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಸಂಚಲನ ಮೂಡಿಸಿದೆ. ಅತ್ಯಂತ ಕಟ್ಟುನಿಟ್ಟಿನ ಸಿಸಿಟಿವಿ ಕಣ್ಗಾವಲು ಹಾಗೂ ಖಾಕಿ ಕೋಟೆಯ ಭದ್ರತೆಯ ನಡುವೆಯೂ ಈ ‘ಪಾಗಲ್ ಪ್ರೇಮಿ’ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಂಡಿರುವುದು ಜೈಲು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ತನ್ನ ಪರವಾಗಿ ಸಾಕ್ಷಿ ಹೇಳದಿದ್ದರೆ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಜೈಲಿನ ಸಲಾಕೆಗಳ ಹಿಂದಿದ್ದೇ ಈ ಕಾಮುಕ ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಹೈ-ಸೆಕ್ಯೂರಿಟಿ ಹೊಂದಿರುವ ಧಾರವಾಡ ಜೈಲಿಗೆ ಮೊಬೈಲ್ ಫೋನ್ ಎಂಟ್ರಿ ಹೇಗಾಯಿತು ಮತ್ತು ಆತನಿಗೆ ಸ್ಮಾರ್ಟ್‌ಫೋನ್ ತಲುಪಿಸಿದ ಆ ‘ಅದೃಶ್ಯ’ ಕೈಗಳು ಯಾರದ್ದು ಎಂಬ ಪ್ರಶ್ನೆ ಈಗ ದಟ್ಟವಾಗಿ ಎದ್ದಿದೆ. ಜೈಲಿನ ವಾರ್ಡನ್ ಅಥವಾ ಅಧಿಕಾರಿಗಳ ಸಹಕಾರವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಘಟನೆಯು ಜೈಲಿನೊಳಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಹಗರಣಗಳ ಬೆನ್ನಲ್ಲೇ ಈಗ ಧಾರವಾಡ ಜೈಲಿನಲ್ಲಿಯೂ ಇಂತಹ ಘಟನೆ ಮರುಕಳಿಸಿರುವುದು ಜೈಲು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ಕುರಿತು ತನಿಖೆ ಚುರುಕುಗೊಂಡಿದ್ದು, ಮೊಬೈಲ್ ಒದಗಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬರುತ್ತಿದೆ.




