Mandyaಜಿಲ್ಲೆ

ಆದಿಚುಂಚನಗಿರಿ ಶ್ರೀಗಳು ಹಾದಿ ತಪ್ಪುತ್ತಿದ್ದಾರೆ ಶಾಸಕ ಬಂಡಿಸಿದ್ದೇಗೌಡ ಟೀಕೆ!

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ವಿರುದ್ಧ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಹಿರಿಯ ಸ್ವಾಮೀಜಿಗಳಾದ ಬಾಲಗಂಗಾಧರನಾಥ ಸ್ವಾಮೀಜಿಯವರು ಎಲ್ಲರನ್ನೂ ಒಗ್ಗೂಡಿಸಿ ಕೊಂಡೊಯ್ಯುವ ಸಂಪ್ರದಾಯ ಹಾಕಿಕೊಟ್ಟಿದ್ದರು, ಆದರೆ ಈಗಿನ ಪೀಠಾಧ್ಯಕ್ಷರ ನುಡಿ ಮತ್ತು ನಡೆಗಳು ಆ ಹಾದಿಯಿಂದ ದೂರ ಸರಿಯುತ್ತಿವೆ, “ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯವರ ಹೆಜ್ಜೆ ದಾರಿ ತಪ್ಪುತ್ತಿದೆ” ಎಂದು ನೇರವಾಗಿ ಟೀಕಿಸಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಮೇಶ್ ಬಂಡಿಸಿದ್ದೇಗೌಡ , ಚುಂಚನಗಿರಿ ಮಠವು ಜಾತ್ಯತೀತವಾಗಿ ಬೆಳೆದಿದೆ ಮತ್ತು ಇಡೀ ಪ್ರಪಂಚಕ್ಕೆ ಚಿರಪರಿಚಿತವಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ತಮಗೆ ಬಹಳ ಬೇಸರವಾಗುತ್ತಿದೆ . ಮಠವು ಎಲ್ಲಾ ವರ್ಗದ ಜನರನ್ನು ಒಂದೇ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ಮಾತುಗಳನ್ನು ಹೇಳುತ್ತಿರುವುದಾಗಿ ಸಮರ್ಥನೆ ನೀಡಿದರು. ಆದರೆ, ಸಾರ್ವಜನಿಕ ವೇದಿಕೆಯಲ್ಲಿ ಸ್ವಾಮೀಜಿಯವರ ಬಗ್ಗೆ ನೀಡಿರುವ ಈ ವಿವಾದಾತ್ಮಕ ಹೇಳಿಕೆಯು ಭಕ್ತರ ಹಾಗೂ ರಾಜಕೀಯ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಸಕರ ಈ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಯವರ ನಡವಳಿಕೆಯನ್ನು ಪ್ರಶ್ನಿಸುವ ಮಟ್ಟಕ್ಕೆ ನಾವು ಬೆಳೆದಿದ್ದೇವೆಯೇ , ಈ ಹಿಂದೆ ಮಠದ ವಿಚಾರವಾಗಿ ತಾವೂ ಒಮ್ಮೆ ಇಂತಹ ಪರಿಸ್ಥಿತಿ ಎದುರಿಸಿದಾಗ ದೇವೇಗೌಡರ ಕಿವಿಮಾತಿನಂತೆ ಸ್ವಾಮೀಜಿಯವರ ಬಳಿ ಕ್ಷಮೆ ಕೋರಿದ್ದನ್ನು ನೆನಪಿಸಿಕೊಂಡರು. ನಮ್ಮ ಸ್ವಾಮೀಜಿಗಳು ತಪ್ಪು ಮಾಡುತ್ತಿದ್ದಾರೆ ಎಂದು ಯಾರೂ ಸಾರ್ವಜನಿಕವಾಗಿ ಬೆರಳು ತೋರಿಸುವಂತಾಗಬಾರದು. “ಹಾದಿ ತಪ್ಪುತ್ತಿದ್ದೀರಿ” ಎಂಬ ಪದ ಬಳಕೆ ಬಹಳ ದೊಡ್ಡ ಅಪಚಾರ ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

Comments (0)

Your email address will not be published. Required fields are marked *

Back to top button