ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: ಅಮರಾವತಿ ಎಕ್ಸ್‌ಪ್ರೆಸ್‌ನಲ್ಲಿ ₹20 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಬಳ್ಳಾರಿ: ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ವಾಸ್ಕೋ ಡ ಗಾಮಾ – ಶಾಲಿಮರ್ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 40.49 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಶ್ವಾನದಳದ ನೆರವಿನೊಂದಿಗೆ ನಡೆಸಿದ ಈ ದಾಳಿಯಲ್ಲಿ, ಸುಮಾರು 20.24 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಆರೋಪಿಗಳು ರೈಲಿನ ಜನರಲ್ ಬೋಗಿಯ ಸೀಟಿನ ಕೆಳಭಾಗದಲ್ಲಿ 19 ಬಂಡಲ್‌ಗಳಲ್ಲಿ ಗಾಂಜಾವನ್ನು ಪ್ಯಾಕ್ ಮಾಡಿ ಬಚ್ಚಿಟ್ಟಿದ್ದರು. ಪೊಲೀಸರು ಮತ್ತು ಶ್ವಾನದಳದವರು ತಪಾಸಣೆಗೆ ಮುಂದಾಗುತ್ತಿದ್ದಂತೆಯೇ ಸುಳಿವು ಪಡೆದ ಆರೋಪಿಗಳು ರೈಲಿನಿಂದ ಇಳಿದು ಪರಾರಿಯಾಗಿದ್ದಾರೆ.
ಪ್ರಸ್ತುತ ರೈಲ್ವೇ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಗಾಂಜಾ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಮತ್ತು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತೀವ್ರ ತನಿಖೆ ಕೈಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣದ ನಂತರ ಈಗ ರೈಲ್ವೇ ನಿಲ್ದಾಣಗಳಲ್ಲೂ ಇಂತಹ ಅಕ್ರಮ ಸಾಗಾಟ ಜಾಲಗಳು ಸಕ್ರಿಯವಾಗಿರುವುದು ಭದ್ರತಾ ದೃಷ್ಟಿಯಿಂದ ದಟ್ಟವಾದ ಆತಂಕವನ್ನು ಮೂಡಿಸಿದೆ. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಾರಿಗೆ ವ್ಯವಸ್ಥೆಯ ಮೂಲಕ ನಡೆಯುವ ಇಂತಹ ಮಾದಕ ದ್ರವ್ಯ ಜಾಲವನ್ನು ಪತ್ತೆಹಚ್ಚಲು ಕಾರ್ಯಪ್ರವೃತ್ತರಾಗಿದ್ದಾರೆ.




