
ಬೆಂಗಳೂರು: ಸಣ್ಣಪುಟ್ಟ ವೈವಾಹಿಕ ಜಗಳಗಳನ್ನು ಅಪರಾಧದ ಮಟ್ಟಕ್ಕೇರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮೈಸೂರಿನ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧ ದಾಖಲಾಗಿದ್ದ 498ಎ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಮದುವೆಗೆ ಮುಂಚೆ ನಡೆದ ವರದಕ್ಷಿಣೆ ಅಥವಾ ಖರ್ಚಿನ ಮಾತುಕತೆಗಳನ್ನು ಮದುವೆಯ ನಂತರದ ಕ್ರೌರ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮದುವೆಯ ನಂತರ ಹಣ ಅಥವಾ ಆಸ್ತಿಗಾಗಿ ನಿಜವಾದ ಕಿರುಕುಳ ನಡೆದಿದೆ ಎಂಬುದಕ್ಕೆ ಸ್ಪಷ್ಟವಾದ ಮತ್ತು ನಿಖರವಾದ ಸಾಕ್ಷ್ಯಗಳಿರಬೇಕು, ಕೇವಲ ಸಾಮಾನ್ಯ ದೂಷಣೆಗಳನ್ನು ಆಧರಿಸಿ ಮನೆಯವರನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ಹಿನ್ನೆಲೆಯಂತೆ, ಮೈಸೂರಿನ ತೇಜಸ್ ಎಂಬುವವರ ಜೊತೆ 2018ರಲ್ಲಿ ವಿವಾಹವಾಗಿದ್ದ ಬೆಂಗಳೂರಿನ ಯುವತಿಯೊಬ್ಬರು, ಮದುವೆಯಾದ ಕೇವಲ ಆರು ತಿಂಗಳಲ್ಲೇ ಪತಿ ಮತ್ತು ಆತನ ಕುಟುಂಬದ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆಯಾದ 19 ದಿನಗಳಲ್ಲೇ ಪತಿ ಅಮೆರಿಕಕ್ಕೆ ತೆರಳಿದ್ದರಿಂದ ಉಂಟಾದ ವಿವಾದವು ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ, ಅರ್ಜಿದಾರರಾದ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲದಿರುವುದನ್ನು ಗಮನಿಸಿದ ಹೈಕೋರ್ಟ್, ಇಂತಹ ಪ್ರಕರಣಗಳನ್ನು ಮುಂದುವರಿಸಲು ಬಿಟ್ಟರೆ ಅದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಹೇಳಿ ಅರ್ಜಿಯನ್ನು ಪುರಸ್ಕರಿಸಿದೆ.




