ಜಿಲ್ಲೆಸುದ್ದಿ

ಲಾರಿ-ಟಿಟಿ ಡಿಕ್ಕಿ; ಕಾಶಿ ಯಾತ್ರೆಗೆ ಹೊರಟಿದ್ದವರಿಗೆ ದೇವನಹಳ್ಳಿ ಬಳಿ ಮೃತ್ಯು!

ದೇವನಹಳ್ಳಿ: ರಾಣಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಶಿ ಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಈ ಮಹಿಳೆಯರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾಶಿಗೆ ತೆರಳಲು ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಲಾರಿ ಮತ್ತು ಟಿಟಿ ವಾಹನದ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ತಿಪಟೂರಿನ ವಿದ್ಯಾನಗರ ನಿವಾಸಿಗಳಾದ ಜಯಮ್ಮ (65), ಯಶೋಧಮ್ಮ (60) ಮತ್ತು ಗಂಗಾ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸಮಯದಲ್ಲಿ ವಾಹನದಲ್ಲಿ ಒಟ್ಟು 15 ಮಂದಿ ಮಹಿಳೆಯರಿದ್ದರು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಸ್ವಗ್ರಾಮವಾದ ತಿಪಟೂರಿಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಉಳಿದ ಪ್ರಯಾಣಿಕರನ್ನು ದೇವನಹಳ್ಳಿಯ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗ ಅಥವಾ ಚಾಲಕನ ನಿಯಂತ್ರಣ ತಪ್ಪಿದ್ದೇ ಈ ಅವಘಡಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಭಕ್ತಿಯ ಪಯಣದಲ್ಲಿದ್ದ ಮಹಿಳೆಯರ ಸಾವು ತಿಪಟೂರಿನಲ್ಲಿ ಶೋಕದ ಛಾಯೆ ಮೂಡಿಸಿದೆ.

Comments (0)

Your email address will not be published. Required fields are marked *

Back to top button