ಜಿಲ್ಲೆರಾಜ್ಯಸುದ್ದಿ

ಮಲೆ ಮಾದಪ್ಪನ ಬೆಟ್ಟದಲ್ಲಿ ಚಿರತೆ ಆತಂಕ; ಪಾದಯಾತ್ರಿಗಳ ರಕ್ಷಣೆಗೆ ಹೈ-ಅಲರ್ಟ್!

ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಏಳು ಮಲೆಯ ಒಡೆಯ ಮಲೆ ಮಾದಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ ಕೈಗೊಂಡಿದ್ದು, ಚಿರತೆ ದಾಳಿಯ ಭೀತಿಯ ನಡುವೆಯೇ ಭಕ್ತರ ಸುರಕ್ಷತೆಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸರ್ಪಗಾವಲು ಹಾಕಿದೆ. ಇತ್ತೀಚೆಗಷ್ಟೇ ಮಂಡ್ಯ ಮೂಲದ ಪಾದಯಾತ್ರಿಯೊಬ್ಬರು ಚಿರತೆ ದಾಳಿಗೆ ಬಲಿಯಾದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಚಾಮರಾಜನಗರ ಜಿಲ್ಲಾಡಳಿತ, ಶಿವರಾತ್ರಿ ಜಾತ್ರೆಗೆ ಬರುವ ಭಕ್ತರಿಗಾಗಿ ಹೈ-ಅಲರ್ಟ್ ಘೋಷಿಸಿದೆ. ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ಮಾರ್ಗದುದ್ದಕ್ಕೂ ಹದ್ದಿನ ಕಣ್ಣು ಇಡಲಾಗಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ.

ಪಾದಯಾತ್ರಿಗಳ ರಕ್ಷಣೆಗಾಗಿ ಪ್ರತಿ ಕಿಲೋಮೀಟರ್‌ಗೆ ಒಂದರಂತೆ ಒಟ್ಟು ಎಂಟು ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ಈ ತಂಡಗಳಿಗೆ ಬಂದೂಕು, ವಾಕಿಟಾಕಿ ಹಾಗೂ ಪಟಾಕಿಗಳನ್ನು ಒದಗಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಿನ ಹಾದಿಯಲ್ಲಿ ಸಂಚರಿಸುವ ಭಕ್ತರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಭಕ್ತರು ಯಾರೂ ಒಬ್ಬೊಬ್ಬರೇ ಕಾಡಿನೊಳಗೆ ಹೋಗಬಾರದು ಮತ್ತು ಕಡ್ಡಾಯವಾಗಿ ಗುಂಪು ಗುಂಪಾಗಿಯೇ ಸಾಗಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾವೇರಿ ನದಿ ದಾಟಿ ಬರುವ ಭಕ್ತರಿಗೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಸಿಬ್ಬಂದಿ ಕೂಡ ಭದ್ರತಾ ವ್ಯವಸ್ಥೆಯಲ್ಲಿ ಕೈಜೋಡಿಸಿದ್ದು, ತುರ್ತು ಪರಿಸ್ಥಿತಿ ನಿಭಾಯಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರಣ್ಯದ ನಡುವಿನ ಪಾದಯಾತ್ರೆಯು ಸಾಹಸಮಯವಾಗಿದ್ದರೂ, ವನ್ಯಜೀವಿಗಳ ಹಾವಳಿ ಇರುವುದರಿಂದ ಭಕ್ತರು ಎಚ್ಚರಿಕೆಯಿಂದ ಮಾದಪ್ಪನ ಸನ್ನಿಧಿಗೆ ತಲುಪುವಂತೆ ಮನವಿ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button