
ಬೆಂಗಳೂರು: ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಲ್ಯಾಂಬೊರ್ಗಿನಿ ಕಾರನ್ನು ಅತಿ ವೇಗವಾಗಿ ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಐಷಾರಾಮಿ ಕಾರನ್ನು ವಶಕ್ಕೆ ಪಡೆದಿದ್ದು, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಎರಡು ಮೂರು ಬಾರಿ ಕಾರನ್ನು ವೃತ್ತಾಕಾರವಾಗಿ ತಿರುಗಿಸಿ ಡ್ರಿಫ್ಟಿಂಗ್ ಮಾಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಿಕ್ಕಿ ರೈ ಅವರು ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಸೂಚಿಸಲಾಗಿದೆ. ಇದರ ಜೊತೆಗೆ, ಕಾರಿನ ಮಾಲೀಕತ್ವದ ಬಗ್ಗೆ ಮಾಹಿತಿ ಪಡೆಯಲು ಆರ್ಟಿಒ ಅಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವುದು ಕಾನೂನುಬಾಹಿರವಾಗಿದ್ದು, ಸಂಚಾರ ನಿಯಮಗಳ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಷಾರಾಮಿ ಕಾರುಗಳ ಅತಿವೇಗದ ಚಾಲನೆ ಮತ್ತು ಡ್ರಿಫ್ಟಿಂಗ್ನಿಂದಾಗಿ ಇತರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ಕೈಗೊಂಡಿದ್ದಾರೆ.




