Top Newsರಾಜಕೀಯರಾಜ್ಯಸುದ್ದಿ

ಕೆಪಿಸಿಸಿಗೆ ಹೊಸ ಸಾರಥಿ ಪಟ್ಟ? ‘ಹೊಸ ರಕ್ತ’ ಬರಲಿ ಎಂದ ಡಿಕೆಶಿ!?

ರಾಜ್ಯ ರಾಜಕೀಯದ ಅಂಗಳದಲ್ಲಿ ಇದೀಗ ಕೆಪಿಸಿಸಿ ಸಾರಥ್ಯ ಬದಲಾವಣೆಯ ಕುರಿತು ಭಾರಿ ಚರ್ಚೆಗಳು ಆರಂಭವಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ‘ಗೇಮ್’ ನಡೆಯುತ್ತಿದೆ ಎಂಬ ಮುನ್ಸೂಚನೆಗಳು ಸಿಗುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ಮತ್ತು ಆಂತರಿಕ ಬದಲಾವಣೆಗಳ ಕೂಗಿನ ನಡುವೆಯೇ, ಶೀಘ್ರದಲ್ಲೇ ಕೆಪಿಸಿಸಿಗೆ ನೂತನ ಸಾರಥಿಯ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ವಿಶೇಷವಾಗಿ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ತೆರೆಮರೆಯಲ್ಲಿ ಇದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡಿದೆ. ಜಾರಕಿಹೊಳಿ ಅವರ ಈ ದಿಢೀರ್ ದೆಹಲಿ ಭೇಟಿಯ ಬೆನ್ನಲ್ಲೇ ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದ್ದು, ಇದು ಪಕ್ಷದೊಳಗಿನ ಅಧಿಕಾರ ಸಮೀಕರಣವನ್ನು ಬದಲಿಸುವ ಲಕ್ಷಣಗಳು ಕಾಣುತ್ತಿವೆ.

ಇನ್ನು ಸತೀಶ್ ಜಾರಕಿಹೊಳಿ ದೆಹಲಿಯಿಂದ ಮರಳುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅವರು ಆಡಿರುವ ಮಾರ್ಮಿಕ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿವೆ. “ಪಕ್ಷಕ್ಕೆ ಹೊಸ ರಕ್ತ ಬರಲಿ” ಎಂಬ ಅವರ ನುಡಿಗಳು, ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆಯೇ ಅಥವಾ ಇದರ ಹಿಂದೆ ಯಾವುದಾದರೂ ರಾಜಕೀಯ ತಂತ್ರವಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ, ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮುನ್ನ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಯಾವುದಾದರೂ ಕಠಿಣ ಷರತ್ತುಗಳನ್ನು ವಿಧಿಸುತ್ತಾರಾ ಎಂಬುದು ಸದ್ಯದ ಕುತೂಹಲದ ಕೇಂದ್ರಬಿಂದುವಾಗಿದೆ.

Comments (0)

Your email address will not be published. Required fields are marked *

Back to top button