ಬೆಂಗಳೂರು: ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೆಂಗಳೂರಿನ ಕೊಡಿಗೇ ಹಳ್ಳಿ ಮೇಲ್ಸೇತುವೆಯಲ್ಲಿ ಬೈಕ್ ಸವಾರಿ ಮಾಡಿ ಹುಚ್ಚಾಟ ಮೆರೆದಿದ್ದ ಸಿಲಂಬರಸನ್ ಎಂಬ ಯುವಕನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಜಾಗರೂಕ ಚಾಲನೆ ಮತ್ತು ಅನುಚಿತ ವರ್ತನೆಗಾಗಿ ಬೈಕ್ ಸವಾರ ಸಿಲಂಬರಸನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದರು. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆ ಕುರಿತು ನೆಟ್ಟಿಗರು ಚರ್ಚಿಸಿದ್ದರು. ಸಿಲಂಬರಸನ್ ಮತ್ತು ಆತನ ಪ್ರೇಯಸಿ ಹೆಲ್ಮೆಟ್ ಧರಿಸದೆ ಬಜಾಜ್ ಪಲ್ಸರ್ 220 ಬೈಕ್‌ನಲ್ಲಿ ಜಾಲಿ ರೈಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಿಲಂಬರಸನ್‌ನನ್ನು ಬಂಧಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಥರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಬೈಕ್ ಚಾಲಕರ ಈ ರೀತಿಯ ಅಜಾಗರೂಕ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.