
ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಠಕಲ್ನ ಮಾಜಿ ಶಾಸಕ ನಾಗನಗೌಡ ಕಂದಕೂರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ನಾಗನಗೌಡ ಕಂದಕೂರು (79) ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗುರುಮಠಕಲ್ನ ಹಾಲಿ ಶಾಸಕ ಶರಣಗೌಡ ಕಂದಕೂರು ಅವರ ತಂದೆಯಾಗಿರುವ ನಾಗನಗೌಡ ಕಂದೂರು 2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ನಿಧನ ಸುದ್ದಿ ತಿಳಿದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅಭಿಮಾನಿ ಬಳಗ ಆಸ್ಪತ್ರೆಗೆ ಧಾವಿಸಿದೆ.
ಭಾನುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ನಾಗನಗೌಡ ಕಂದಕೂರು ವಿಧಿವಶ ಹಿನ್ನೆಲೆ ಶಾಸಕ ಶರಣಗೌಡ ಕಂದಕೂರು ತಂದೆಯ ಪಾಥೀವ ಶರೀರವನ್ನು ಅಂಬುಲೆನ್ಸ್ನಲ್ಲಿ ಯಾದಗಿರಿ ನಗರದ ಮನೆಗೆ ತೆಗೆದುಕೊಂಡು ಬಂದಿದ್ದಾರೆ.
ಇನ್ನೂ ಮಾಜಿ ಶಾಸಕ ನಾಗನಗೌಡ ಕಂದಕೂರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ನಾಗನಗೌಡ ಕಂದಕೂರ ಅಗಲಿಕೆ ನನಗೆ ತೀವ್ರ ಅಘಾತ ಉಂಟು ಮಾಡಿದೆ. ಸರಳ ಸಜ್ಜನಿಕೆಯ ವ್ಯಕ್ತಿ ಅವರು ದಶಕಗಳಿಂದ ನನಗೆ ಬಹಳ ಆತ್ಮೀಯರಾಗಿದ್ದರು. ಮೃತರ ಕುಟುಂಬದವರಷ್ಟೇ ನಾನು ದುಃಖಿತನಾಗಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಂತಾಪ ಸೂಚಿಸಿದರು.




